ಪುತ್ತೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ದೇಶಕ್ಕೆ ಅತೀ ದೊಡ್ಡ ಕೊಡುಗೆಯಾಗಿದೆ. ಸಂವಿಧಾನದ ಮೂಲಕ ದೇಶಕ್ಕೆ ಸಮಾನತೆ ಮತ್ತು ನ್ಯಾಯಯುತ ಮೌಲ್ಯ ದೊರಕಿದಂತಾಗಿದೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅಂಬೇಡ್ಕರ್ ನೀಡಿರುವ ಇನ್ನೊಂದು ಮೌಲ್ಯವಾಗಿದೆ. ಇಂದಿಗೂ ಕೆಲವು ಕಡೆಗಳಲ್ಲಿ ಅಸ್ಪರ್ಷತೆ ಕಂಡು ಬರುತ್ತಿರುವುದು ದುರಂತವಾಗಿದ್ದು, ಇದನ್ನು ತೊಡೆದು ಹಾಕಲು ಎಲ್ಲರ ಪ್ರಯತ್ನ ಅಗತ್ಯ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಹೇಳಿದರು.
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಇವುಗಳ ಸಂಯುಕ್ತ ಆಶ್ರಯಲ್ಲಿ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ದೀಪಪ್ರಜ್ವಲನೆ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶತಮಾನಗಳ ದಾಸ್ಯ ವಿಮೋಚನೆಗಾಗಿ ಜನ್ಮ ತಾಳಿದ ಡಾ. ಅಂಬೇಡ್ಕರ್ ಅವರು ತಾನು ಸ್ವತಃ ದೌರ್ಜನ್ಯ, ಅನ್ಯಾಯಗಳನ್ನು ಅನುಭವಿಸಿದ್ದರು. ಇಂದಿಗೂ ಅಸ್ಪರ್ಶತೆಯು ಸಮಾಜದಲ್ಲಿದೆ. ಅಸ್ಪರ್ಶತೆಯ ಹೆಸರಿನಲ್ಲಿ ಒಂದು ಸಮುದಾಯವನ್ನು ಶೋಷಣೆ ಮಾಡಿದವರು ಅವರಲ್ಲಿ ಕ್ಷಮೆ ಕೇಳಬೇಕಾಗಿದೆ. ಸಂವಿಧಾನದ ಮೂಲಕ ಡಾ. ಅಂಬೇಡ್ಕರ್ ಅವರು ಸಮಾಜಕ್ಕೆ ಶಕ್ತಿ ನೀಡಿದ್ದಾರೆ. ಆದರೆ ಇದೀಗ ಸಂವಿಧಾನವನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿದೆ. ಮೀಸಲಾತಿ ಎಂಬುದು ಬಡತನದ ವಿಮೋಚನೆಯಲ್ಲ ಬದಲಿಗೆ ಇದೊಂದು ಸಾಮಾಜಿಕ ನ್ಯಾಯವಾಗಿದೆ. ಆರ್ಥಿಕ ಸ್ಥಿತಿಯಿಂದ ಮೇಲೆತ್ತಲು ಮೀಸಲಾತಿ ಬಂದಿಲ್ಲ. ವೈಯಕ್ತಿಕ ಗೌರವಕ್ಕಾಗಿ ಮೀಸಲಾತಿಯಿದೆ ಎಂದರು.
ಸಂಸ್ಮರಣಾ ಉಪನ್ಯಾಸ ನೀಡಿದ ಬೆಳ್ತಂಗಡಿ ವಲಯದ ಉಪವಲಯ ಅರಣ್ಯಾಧಿಕಾರಿ ರವಿಚಂದ್ರ ಪಡುಬೆಟ್ಟು ಅವರು ಡಾ. ಅಂಬೇಡ್ಕರ್ ಅವರು ತನ್ನ ಕುಟುಂಬಕ್ಕಿAತಲೂ ಹೆಚ್ಚಾಗಿ ಈ ದೇಶವನ್ನು ಪ್ರೀತಿಸಿದ್ದರು. ಈಗಲೂ ದುರ್ನಾತ ಬೀರುವ ಸಂಸ್ಕೃತಿಯಾಗಿ, ಮಾರಕ ರೋಗವಾಗಿ ಅಸ್ಪರ್ಶತೆಯು ಉಳಿದುಕೊಂಡಿದೆ. ಅಸ್ಪರ್ಶತೆಗೆ ಪ್ರೇರಣೆಯಾಗಿರುವ ಸಂಪ್ರದಾಯ, ಮೂಡನಂಬಿಕೆಗಳನ್ನು ಮೆಟ್ಟಿ ನಿಂತು ಸಮತಾ ಸಮಾಜ ನಿರ್ಮಿಸಲು ಎಲ್ಲರೂ ಮುಂದಾಗಬೇಕಾಗಿದೆ. ಅಸ್ಪರ್ಶತೆಯ ನಿವಾರಣೆಗಾಗಿ ಅಂಬೇಡ್ಕರ್ ಅವರು ವಿವಿಧ ಚಳವಳಿ, ಬರಹ, ಹೋರಾಟಗಳನ್ನು ನಡೆಸುತ್ತಾ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಶಿಕ್ಷಣಕ್ಕಾಗಿ ಅವರು ನಡೆಸಿದ ಪ್ರಯತ್ನ ಇದೀಗ ನಮ್ಮಿಂದಲೂ ನಡೆಯಬೇಕಾಗಿದೆ. ಸಮಾಜ ಸಮಾನ ತಕ್ಕಡಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಬೇಕಾಗಿದೆ. ಯಾರಿಗೂ ತೊಂದರೆ ನೀಡದೆ ಬದುಕುವುದೇ ನಿಜವಾದ ಧರ್ಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ನಂದಿತಾ ಮತ್ತು ಚೈತ್ರಾ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿ ಉಪಸ್ಥಿತರಿದ್ದರು.
ತಾಲೂಕು ಕಚೇರಿ ಸಿಬ್ಬಂದಿ ಶ್ರೀಕಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.























