ಪುತ್ತೂರು: ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಶಾಸಕರ ವಿರುದ್ದ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ರಿಕ್ಷಾ ಚಾಲಕನೋರ್ವನ ಕೈಯಿಂದಲೇ ಶಾಸಕ ಅಶೋಕ್ ರೈ ಅವರು ಕುಡಿಪ್ಪಾಡಿ ಗ್ರಾಮದ ನೂತನ ರಸ್ತೆಯನ್ನು ಉದ್ಘಾಟಿಸಿದ ಘಟನೆ ನಡೆದಿದೆ.
ಕುಡಿಪ್ಪಾಡಿ ಗ್ರಾಮದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ, ಶಾಸಕರು ಅನುದಾನ ನೀಡುತ್ತಿಲ್ಲ ಎಂದು ಕುಡಿಪ್ಪಾಡಿಯ ಚಂದ್ರಶೇಖರ ಎಂಬವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶಾಸಕ ಅಶೋಕ್ ರೈ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಕುಡಿಪ್ಪಾಡಿಯ ರಿಕ್ಷಾ ಚಾಲಕ ಹರೀಶ್ ನಾಯಕ್ ಎಂಬವರು ಭಾಗವಹಿಸಿದ್ದರು.
ಭಾನುವಾರದಂದು ಶಾಶಕ ಅಶೋಕ್ ರೈ ಅವರು ಕುಡಿಪ್ಪಾಡಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳಿದ್ದರು. ಗ್ರಾಮದ ಎಸ್ ಟಿ ಕಾಲನಿಗೆ ತೆರಳುವ ರಸ್ತೆಗೆ 10 ಲಕ್ಷ ರೂ. ಅನುದಾನವನ್ನು ನೀಡಿದ್ದು ಅದರ ಕಾಮಗಾರಿ ಪೂರ್ಣಗೊಂಡಿದೆ. ಈ ರಸ್ತೆಯ ಉದ್ಘಾಟನೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಹರೀಶ್ ನಾಯಕ್ ಭಾಗವಹಿಸಿದ್ದರು. ಇದೇ ರಸ್ತೆಯ ಮೂಲಕ ಹರೀಶ್‌ರವರು ತೆರಳುವುದಾಗಿದೆ. ಇವರನ್ನು ಕಂಡ ಕೂಡಲೇ ಶಾಸಕರು ಅಭಿವೃದ್ದಿಯಾಗಿಲ್ಲ ಎಂದು ಕೆಲವರು ಸುದ್ದಿಗೋಷ್ಠಿ ನಡೆಸಿದ್ದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೆ. ಇದೀಗ ಉದ್ಘಾಟನೆಯಾಗುತ್ತಿರುವುದು ಅಭಿವೃದ್ದಿಯಲ್ವ? ಎಂದು ಕೇಳಿದರು. ಬಳಿಕ ಹರೀಶ್‌ರವರ ಮೂಲಕವೇ ನೂತನ ರಸ್ತೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆಯನ್ನೂ ಮಾಡಿಸಿದ್ದಾರೆ.
2.84 ಕೋಟಿ ರೂ. ಅನುದಾನ ನೀಡಿದ್ದೇನೆ
ಈ ವೇಳೆ ಮಾತನಾಡಿದ ಶಾಸಕರು ಕುಡಿಪ್ಪಾಡಿ ಗ್ರಾಮಕ್ಕೆ ಎರಡು ವರ್ಷದಲ್ಲಿ 2.84 ಕೋಟಿ ರೂ. ಅನುದಾನ ನೀಡಿದ್ದೇನೆ. ಸಣ್ಣ ಗ್ರಾಮವಾದರೂ ದೊಡ್ಡ ಮೊತ್ತದ ಅನುದಾನವನ್ನು ನೀಡಿದ್ದೇನೆ. ಎಲ್ಲಿಯೂ ತಾರತಮ್ಯ ಮಾಡಿಲ್ಲ. ಅಭಿವೃದ್ದಿಯಾಗಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದವರು ರಾಜಕೀಯ ಪ್ರೇರಿತ ಸುದ್ದಿಗೋಷ್ಠಿಯಗಿತ್ತು. ಇಲ್ಲಿ ಆಗಿರುವ ಕೆಲಸವನ್ನು ಒಮ್ಮೆ ಪರಿಶೀಲನೆ ಮಾಡಲಿ. ಇವತ್ತು 78 ಲಕ್ಷ ರೂ ಅನುದಾನದಲ್ಲಿ ವಿವಿಧ ಶಿಲಾನ್ಯಾಸ ಮಾಡಿದ್ದೇನೆ. ಮುಂದೆಯೂ ಈ ಗ್ರಾಮಕ್ಕೆ ಅನುದಾನ ನೀಡುತ್ತೇನೆ. ನಮಗೆ ಗ್ರಾಮದ ಅಭಿವೃದ್ದಿ ಮುಖ್ಯ ರಾಜಕೀಯ ಮಾಡುವವರು ಅದನ್ನೇ ಮಾಡುತ್ತಿರಲಿ. ಕಬಕದಿಂದ ಕುಂಡಡ್ಕ ರಸ್ತೆಗೆ 4 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೆಲವು ಕಡೆಗಳಲ್ಲಿ ಡಾಮಾರು ರಸ್ತೆಗಳು ಹೊಂಡ ಬಿದ್ದಿದೆ ಇದಕ್ಕೂ 25 ಲಕ್ಷ ರೂ. ಅನುದಾನ ಮಂಜೂರಾಗಿದೆ. ಮಳೆಗಾಲದಲ್ಲಿ ಕಾಮಗಾರಿ ನಡೆಸಲು ಕಷ್ಟವಾದರೆ ಹೊಂಡಗಳನ್ನು ಮುಚ್ಚುವ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.



















