ಪುತ್ತೂರು: ಉಪ್ಪಿನಂಗಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಉಬಾರ್ ಮಂಜ ಬೈದ್ಯ ಅವರ ಪುತ್ಥಳಿ ನಿರ್ಮಿಸುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಲ್ಲವ ಬ್ರಿಗೇಡ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಜೂ. 15ರಂದು ಮನವಿ ಸಲ್ಲಿಸಲಾಯಿತು.
ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಬಿಲ್ಲವ ಸಮಾಜ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಪುತ್ತೂರಿನಲ್ಲಿ ಬಿಲ್ಲವ ಬ್ರಿಗೇಡ್ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಸಮಾಜ ವಿರೋಧಿ ಕೆಲಸಗಳ ವಿರುದ್ಧ ಹೋರಾಟ ನಡೆಸುವುದು ಬಿಲ್ಲವ ಬ್ರಿಗೇಡ್‌ನ ಪ್ರಮುಖ ಉದ್ದೇಶವಾಗಿದೆ. ಬಿಲ್ಲವ ಬ್ರಿಗೇಡ್ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ನಿಯೋಜಿತ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಸದಸ್ಯರನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ನಮ್ಮ ಪುತ್ತೂರಿನ ಬಿಲ್ಲವ ಬ್ರಿಗೇಡ್ ಕಾರ್ಯಾಚರಿಸಲಿದೆ. ಬ್ರಿಗೇಡ್‌ನ ಪ್ರಥಮ ಕಾರ್ಯ ಯೋಜನೆಯ ಅಂಗವಾಗಿ ಉಪ್ಪಿನಂಗಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಉಬಾರ್ ಮಂಜ ಬೈದ್ಯರ ಪುತ್ಥಳಿಯನ್ನು ನಿರ್ಮಿಸುವಂತೆ ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.
ಉಬಾರ್ ಮಂಜ ಬೈದ್ಯ ಎಂದು ಕರೆಸಿಕೊಳ್ಳುತ್ತಿದ್ದ ಉಪ್ಪಿನಂಗಡಿಯ ಮಂಜಯ್ಯ ಬೈದ್ಯ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಕರಾವಳಿಯ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಕ್ರಾಂತಿಕಾರಿ ರೈತ ನಾಯಕರೂ, ಬ್ರಿಟಿಷ್ ಸರಕಾರದಲ್ಲಿ ಉದ್ಯೋಗಿಯೂ ಆಗಿದ್ದ ಮಂಜಯ್ಯ ಬೈದ್ಯ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿ ಅಮರರಾದವರು. ಅಪ್ರತಿಮ ದೇಶ ಭಕ್ತರಾಗಿದ್ದ ಮಂಜ ಬೈದ್ಯರು ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದವರು. ಮಂಗಲ ಪಾಂಡೆ ನೇತೃತ್ವದಲ್ಲಿ ನಡೆದ ಸಿಪಾಯಿ ದಂಗೆ ಎಂದು ಕರೆಯಲ್ಪಟ್ಟ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 20 ವರ್ಷಗಳ ಮೊದಲೇ 1837ರಲ್ಲಿ ನಡೆದ ಕಲ್ಯಾಣಪ್ಪನ ಕಾಟುಕಾಯಿ ಹೋರಾಟ ಅಥವಾ ಅಮರ ಸುಳ್ಯದ ಸ್ವಾತಂತ್ರ್ಯ ದಂಗೆಯಲ್ಲಿ ಮಂಜ ಬೈದ್ಯ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ರೈತ ನಾಯಕ ಕೆದಂಬಾಡಿ ರಾಮೇಗೌಡರ ಜೊತೆಗೆ ಅವರಿಗೆ ಹೆಗಲೆಣೆಯಾಗಿ ಹೋರಾಡಿದವರು. ಅಜಾನುಬಾಹು ಆಗಿದ್ದ ಏಳು ಕಾಲು ಅಡಿ ಎತ್ತರದ ಉಪ್ಪಿನಂಗಡಿ ಮಂಜ ಬೈದ್ಯರು ಬ್ರಿಟಿಷರು ರೈತರ ಮೇಲೆ ಹೇರಿದ್ದ ಅನ್ಯಾಯದ ನಗದು ಕಂದಾಯ ನೀತಿಯ ವಿರುದ್ಧ ಸ್ವತಃ ಬ್ರಿಟಿಷ್ ಸರಕಾರದ ಉದ್ಯೋಗಿಯಾಗಿದ್ದರೂ ದಂಗೆ ಎದ್ದು ಹೋರಾಟ ರೂಪಿಸಿದ್ದರು. ಬ್ರಿಟಿಷ್ ಆಡಳಿತದ ಅಂದಿನ ತಾಲೂಕು ಕೇಂದ್ರ ಉಪ್ಪಿನಂಗಡಿಯ ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿದ್ದ ಮಂಜ ಬೈದ್ಯರು ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದವರು. ಸ್ವಾತಂತ್ರ್ಯ ಹೋರಾಟದ ವಿಷಯ ತಿಳಿಯುತ್ತಲೇ ಸಿದ್ಧತೆ ಮಾಡಿಕೊಂಡು ಹತ್ತಾರು ಹೋರಾಟಗಾರರೊಂದಿಗೆ ಸೇರಿ ಚಳುವಳಿ ರೂಪಿಸಿದ್ದರು. ಉಪ್ಪಿನಂಗಡಿ ಮಂಜ ಬೈದ್ಯರು ಮತ್ತು ಅವರೊಂದಿಗಿನ ಕ್ರಾಂತಿಕಾರಿ ಪಡೆ 1837 ಏಪ್ರಿಲ್ 5ರಂದು ಮಂಗಳೂರಿನ ಬಾವುಟಗುಡ್ಡದಲ್ಲಿದ್ದ ಬ್ರಿಟಿಷರ ಧ್ವಜವನ್ನು ಕೆಳಗಿಳಿಸಿ ಕನ್ನಡಿಗರಾದ ಹಾಲೇರಿ ರಾಜವಂಶದ ಧ್ವಜವನ್ನು ಹಾರಿಸಿದ್ದರು. ಈ ಐತಿಹಾಸಿಕ ಘಟನೆಯಿಂದಾಗಿಯೇ ಆ ಸ್ಥಳಕ್ಕೆ ಬಾವುಟಗುಡ್ಡೆ ಎಂಬ ಹೆಸರು ಬಂದಿದೆ. ಈ ಮೂಲಕ ಸುಮಾರು 13 ದಿನಗಳ ಕಾಲ ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ್ದರು. ಅನಂತರ ಬ್ರಿಟಿಷ್ ಸೈನ್ಯ ಕ್ರಾಂತಿಯನ್ನು ಹತ್ತಿಕ್ಕಿದಾಗ ಮಂಜ ಬೈದ್ಯರನ್ನು ಬಂಧಿಸಲಾಯಿತು. 1837 ಮೇ 27ರಂದು ಅವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬ್ರಿಟಿಷರು ಬಹಿರಂಗವಾಗಿ ಗಲ್ಲಿಗೇರಿಸಿದರು. ಜನರಲ್ಲಿ ಭಯ ಹುಟ್ಟಿಸಲು ಬ್ರಿಟಿಷರು ಅವರ ಮೃತದೇಹವನ್ನು ತಿಂಗಳುಗಟ್ಟಲೆ ಗಲ್ಲುಗಂಬದಿಂದ ಕೆಳಗಿಳಿಸದೆ ರಣಹದ್ದುಗಳು ತಿನ್ನುವಂತೆ ಹಾಗೆಯೇ ಬಿಡುವ ಕ್ರೂರ ಆದೇಶವನ್ನು ನೀಡಿದ್ದರು. ಭಾರತದ ಸ್ವಾತಂತ್ರ್ಯಕ್ಕಾಗಿ ತಂಡ ಕಟ್ಟಿ, ಆರ್ಥಿಕ ಬಲ ತುಂಬಿ, ಹೋರಾಡಿ, ಒಂದೊಮ್ಮೆ ಸ್ವಾತಂತ್ಯವನ್ನು ಕೂಡಾ ಪಡೆದ ಹಿರಿಮೆಯೊಂದಿಗೆ ದೇಶಕ್ಕಾಗಿ ಬಲಿದಾನವಾಗಿ ಹೋದವರು ಉಪ್ಪಿನಂಗಡಿ ಮಂಜ ಬೈದ್ಯರು. ಇಂಥ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ ಹಿರಿಮೆ ಗರಿಮೆ, ಬಲಿದಾನ ಇಂದಿನ ಹಾಗೂ ಮುಂದಿನ ತಲೆಮಾರಿಗೆ ತಿಳಿಯುವಂತಾಗಬೇಕಿದೆ. ಆ ಹಿನ್ನೆಲೆಯಲ್ಲಿ ಮಂಜ ಬೈದ್ಯರ ಕುರಿತು ಇನ್ನಷ್ಟು ತಿಳಿಸುವ ಕಾರ್ಯವಾಗಬೇಕಿದೆ. ಅದಕ್ಕಾಗಿ ಮೊದಲ ಹಂತದಲ್ಲಿ ಉಪ್ಪಿನಂಗಡಿಯಲ್ಲಿ ಮಂಜ ಬೈದ್ಯರ ಪುತ್ಥಳಿ ನಿರ್ಮಿಸಲು ತಾವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಿಲ್ಲವ ಬ್ರಿಗೇಡ್ ಮುಂದಾಳುಗಳಾದ ಜಯಪ್ರಕಾಶ್ ಬದಿನಾರು, ರಂಜಿತ್ ಸುವರ್ಣ ಪೆರಿಯಡ್ಕ, ಚಂದ್ರಶೇಖರ ಕಲ್ಲಗುಡ್ಡೆ, ಹರೀಶ್ ಬಂಗೇರ ಪಡ್ಡಾಯೂರು, ಕಿರಣ್ ಕುಮಾರ್ ಬಸಂತಕೋಡಿ, ಪ್ರವೀಣ್ ಸಣ್ಣಗುತ್ತು ಅಳಕೆ, ಎಲ್ಯಣ್ಣ ಪೂಜಾರಿ ಮೈರಲ್ಕ, ಮೋಹನ್ ಗುರ್ಜಿನಡ್ಕ, ಅಣ್ಣಿಪೂಜಾರಿ ಕೆಮ್ಮಾಯಿ, ಕೇಶವ ಸುವರ್ಣ ಮೇರ್ಲ, ಶಶಿಧರ ಪೂಜಾರಿ ಕಜೆ ಸೇಡಿಯಾಪು, ನವೀನ್ ಕರ್ಕೇರ ಬಲ್ನಾಡು, ಹರೀಶ್ ಕರ್ಕೇರ ನಿಡ್ಪಳ್ಳಿ, ಪೃಥ್ವಿರಾಜ್ ಗೆಣಸಿನಕುಮೇರು, ಗೌತಮ್ ಕೆ.ಎಸ್. ನೆಕ್ಕಿಲಾಡಿ, ಬಾಲಕೃಷ್ಣ, ವಾಸು ಪೂಜಾರಿ ದರ್ಬೆ, ಭವಿತ್, ರೇಖಾ, ಸುಮತಿ, ಸುನಿತಾ, ಚೇತನಾ, ಹರಿಣಾಕ್ಷಿ, ಯಶೋದ ಮತ್ತಿತರರು ಉಪಸ್ಥಿತರಿದ್ದರು.



















