ಪುತ್ತೂರು: ಕೆಟ್ಟು ಹೋಗಿರುವ ಮಾಯಂಗಲ – ಕೂಡುರಸ್ತೆ ನಡುವಿನ ಸಂಪರ್ಕ ರಸ್ತೆಯನ್ನು ದುರಸ್ತಿ ಪಡಿಸದೇ ಹೋದರೆ, ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಅರುಣ್ ಕುಮಾರ್ ಪುತ್ತಿಲ ಎಚ್ಚರಿಸಿದರು.
ನೀಡಿದ ಭರವಸೆ ಈಡೇರಿಸದ ಅಧಿಕಾರಿಗಳ ವಿರುದ್ಧ ಪುತ್ತಿಲ ಪರಿವಾರದ ನೇತೃತ್ವದಲ್ಲಿ ಗುರುವಾರ ನರಿಮೊಗರು ಗ್ರಾ.ಪಂ. ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಜುಲೈ 23ರಂದು 2 ದಿನಗಳಲ್ಲಿ ಮಾಯಂಗಲ – ಕೂಡುರಸ್ತೆ ನಡುವಿನ ಸಂಪರ್ಕ ರಸ್ತೆಯನ್ನು ಸರಿಪಡಿಸುವ ಭರವಸೆಯನ್ನು ಪಿಡಿಓ ಆಶಾ ಅವರು ನೀಡಿದ್ದರು. ಆದರೆ ಜುಲೈ 27ರಂದು ಪ್ರತಿಭಟನೆ ನಡೆಸಿದಾಗ, ಅವರು ಕರೆಯನ್ನೇ ಸ್ವೀಕರಿಸಿಲ್ಲ. ಗ್ರಾಮ ಪಂಚಾಯತ್ ಅಧಿಕಾರಿಯೋರ್ವರು ಈ ರೀತಿಯ ಧೋರಣೆ ತೋರಿಸುವುದು ಖಂಡನೀಯ. ಇಂದು ಪಿಡಿಓ ಕ್ಷಮೆ ಯಾಚಿಸದೇ ಇದ್ದರೆ ಅವರನ್ನು ಕಚೇರಿ ಒಳಗಡೆಗೇ ಹೋಗಲು ಬಿಡುತ್ತಿರಲಿಲ್ಲ. ಆದರೆ ಅಮ್ಮನ ಸ್ಥಾನದಲ್ಲಿ ಕಂಡು ಕ್ಷಮಿಸಿದ್ದೇವೆ ಎಂದರು.
ನ್ಯಾಯಪರ ಹೋರಾಟದಿಂದ ಹಿಂದೆ ಸರಿಯಲ್ಲ:
ಈವರೆಗೆ ಹಲವು ಶಾಸಕರನ್ನು ಕಂಡಿದ್ದೇವೆ. ಆದರೆ ಸರ್ವಾಧಿಕಾರಿ ಧೋರಣೆ ಎಲ್ಲೂ ಕಂಡಿಲ್ಲ. ಅಧಿಕಾರ ಶಾಶ್ವತವಲ್ಲ. ನಾಳೆ ಮತ್ತೆ ಗೆಲ್ಲುತ್ತೇನೆ, ಸಚಿವನಾಗ್ತೇನೆ ಎಂಬ ಕನಸಿರಬಹುದು. ಆದರೆ ಜನರ ವಿರುದ್ಧ ಹೋದರೆ ಏನಾದೀತು ಎಂಬ ಕಲ್ಪನೆಯೂ ಇರಲಿ. ಅಧಿಕಾರಿಗಳಿಗೆ ಸಮಾಜದ ಋಣ ತೀರಿಸುವ ಗುಣ ಇರಲಿ. ಇಲ್ಲದೇ ಹೋದರೆ ಜನರ ಶಾತ ತಟ್ಟಿತು ಎಂದು ಎಚ್ಚರಿಸಿದರು.
ತಾಪಂ ಇಓ ಭರವಸೆ
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಹದಗೆಟ್ಟು ಹೋದ ರಸ್ತೆಯ ಎರಡೂ ಭಾಗದ ಚರಂಡಿ ದುರಸ್ತಿ ಕಾರ್ಯ ನಾಳೆಯಿಂದಲೇ ಆರಂಭಿಸಲಾಗುವುದು. ರಸ್ತೆಯ ಹೊಂಡ ಮುಚ್ಚುವ ಕಾಮಗಾರಿ ನಡೆಸಲು 15 ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದ ಬಳಿಕ ಪ್ರತಿಭಟನಾ ಧರಣಿ ವಾಪಸ್ ಪಡೆಯಲಾಯಿತು. ಜಿಪಂ ಪಂಚಾಯತ್‌ರಾಜ್ ಎಂಜಿನಿಯರ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭರತ್, ನರಿಮೊಗರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಆಶಾ ಜೊತೆಗಿದ್ದರು.
ಮಾಜಿ ತಾಪಂ ಸದಸ್ಯ ಜಯರಾಮ ಪೂಜಾರಿ, ರಿಕ್ಷಾ ಚಾಲಕ ರಾಧಾಕೃಷ್ಣ, ಮಾಜಿ ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಣೈ, ಸ್ಥಳೀಯರಾದ ದೇವಪ್ಪ, ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಕಾರ್ಯದರ್ಶಿ ರವಿಕುಮಾರ್ ರೈ ಮಠ, ಮುಖಂಡರಾದ ಪ್ರಶಾಂತ್ ನೆಕ್ಕಿಲಾಡಿ, ನಾರಾಯಣ ಪ್ರಕಾಶ್, ಶ್ರೀರಾಮ ಭಟ್ ಪಾತಾಳ ಮತ್ತಿತರರು ಮಾತನಾಡಿದರು.
ಪ್ರಮುಖರಾದ ಉಮೇಶ್ ಕೋಡಿಬೈಲು, ಮಹೇಂದ್ರ ವರ್ಮ, ಅನಿಲ್ ತೆಂಕಿಲ, ತಾರಾನಾಥ ಆನಡ್ಕ, ಪುರಂದರ, ಕೇಶವ ಮುಕ್ವೆ, ದಿನೇಶ್ ಮಜಲು ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆ ವಾಪಾಸ್
ನವೀನ್ ಭಂಡಾರಿ ಮಾತನಾಡಿ, ಗ್ರಾಪಂ ಆಡಳಿತಾಧಿಕಾರಿ ಅವರ ಸಮ್ಮುಖದಲ್ಲಿ ರಸ್ತೆ ಬದಿಯ ಚರಂಡಿ ದುರಸ್ತಿಗೆ 20 ಸಾವಿರ ರೂ. ಅನುದಾನ ಮಂಜೂರು ಮಾಡಲಾಗಿದೆ. ಸರಕಾರಿ ನಿಯಮಾವಳಿಗಳನ್ನು ಪಾಲಿಸಿ ವಾರದೊಳಗೆ ಕೆಲಸ ಮಾಡಲಾಗುವುದು. ಬಳಿಕ ಶಾಸಕರು ಅನುದಾನವಿಟ್ಟು ರಸ್ತೆಯ ಕಾಮಗಾರಿ ನಡೆಸಲಾಗುವುದು ಎಂದರು.
ಇದರಿಂದ ಕೆರಳಿದ ಪ್ರತಿಭಟನಾಕಾರರು, 20 ಸಾವಿರ ರೂ. ಗಳ ಚರಂಡಿ ಕಾಮಗಾರಿ ನಡೆಸಲು ವಾರವೇಕೆ ಬೇಕು? ನಾಳೆಯೇ ಆರಂಭಿಸಿ. ಅಗತ್ಯ ಬಿದ್ದರೆ ಮುಂಗಡ ಕಾಮಗಾರಿ ನಡೆಸಿ. ನಿಮಗೆ ಜೆಸಿಬಿ ಸಿಕ್ಕಿಲ್ಲದಿದ್ದರೆ ನಾವು ಒದಗಿಸಿ ಕೊಡುತ್ತೇವೆ. ಹಣವಿಲ್ಲದಿದ್ದರೆ ಹೇಳಿ. ಅದನ್ನೂ ನಾವು ಸಂಗ್ರಹಿಸಿ ಈಗ 20 ಸಾವಿರ ರೂ. ನಿಮ್ಮ ಕೈಯ್ಯಲ್ಲಿಡುತ್ತೇವೆ ಎಂದು ಪುತ್ತಿಲ ಹೇಳಿದರು.
ಸಾಕಷ್ಟು ಹೊತ್ತು ಈ ವಿಚಾರದಲ್ಲಿ ಚರ್ಚೆ ನಡೆದ ಬಳಿಕ, ಚರಂಡಿ ದುರಸ್ತಿ ಕಾರ್ಯ ನಾಳೆಯಿಂದಲೇ ಆರಂಭಿಸಲಾಗುವುದು. ಆದರೆ ರಸ್ತೆ ದುರಸ್ತಿಗೆ 16 ದಿನಗಳ ಕಾಲಾವಕಾಶ ಬೇಕೇ ಬೇಕು ಎಂದು ಕಾರ್ಯನಿರ್ವಹಣಾ ಅಧಿಕಾರಿ ಹೇಳಿದರು. ಅಂತಿಮವಾಗಿ ಅರುಣ್ ಕುಮಾರ್ ಪುತ್ತಿಲ ಈ ಸೂತ್ರಕ್ಕೆ ಒಪ್ಪುವ ಮೂಲಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
























