ಪುತ್ತೂರು: ಬೆಂಗಳೂರು–ಮಂಗಳೂರು ನಡುವೆ ಸಂಚರಿಸಲಿರುವ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಾಯೋಗಿಕ ಸಂಚಾರದ ಹಂತದಲ್ಲೇ ನಿಲುಗಡೆ ಕಲ್ಪಿಸುವಂತೆ ಹಿರಿಯ ವಕೀಲರಾದ ಡಾ. ಅರುಣಾ ಶ್ಯಾಮ್. ಎಂ. ಅವರು ರೈಲ್ವೆ ಮಂಡಳಿಗೆ ಮನವಿ ಮಾಡಿದ್ದಾರೆ.
ರೈಲ್ವೆ ಮಂಡಳಿಯ ನಿರ್ದೇಶನದಂತೆ ಯಶವಂತಪುರ–ಮಂಗಳೂರು ಸೆಂಟ್ರಲ್ ನಡುವೆ ಸೆ.5ರಂದು 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮತ್ತೊಂದು ಪ್ರಾಯೋಗಿಕ ಸಂಚಾರ ನಿಗದಿಯಾಗಿತ್ತು. ಬೆಂಗಳೂರು ಹಾಗೂ ಕರಾವಳಿ ಕರ್ನಾಟಕದ ನಡುವಿನ ವೇಗದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಈ ಸೇವೆ ಸ್ವಾಗತಾರ್ಹವಾಗಿದ್ದು, ಪುತ್ತೂರಿನಲ್ಲಿ ನಿಲುಗಡೆ ನೀಡುವುದರಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಆಡಳಿತ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಹಲವು ಪ್ರದೇಶಗಳ ಪ್ರಯಾಣಿಕರಿಗೂ ಪ್ರಮುಖ ರೈಲು ಸಂಪರ್ಕ ಕೇಂದ್ರವಾಗಿದೆ. ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಆರೋಗ್ಯ ಸೇವೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಪುತ್ತೂರಿನಿಂದ ಬೆಂಗಳೂರು ಮತ್ತು ಮಂಗಳೂರಿಗೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಂದೇ ಭಾರತ್‌ಗೆ ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಾಯೋಗಿಕ ಸಂಚಾರದ ಸಂದರ್ಭದಲ್ಲೇ ಪುತ್ತೂರಿನಲ್ಲಿ ನಿಲುಗಡೆ ನೀಡಿದರೆ ಪ್ರಯಾಣಿಕರ ಬೇಡಿಕೆ, ಹತ್ತುವ–ಇಳಿಯುವ ಪ್ರಯಾಣಿಕರ ಸಂಖ್ಯೆ, ನಿಲುಗಡೆಯ ಕಾರ್ಯಸಾಧ್ಯತೆ ಹಾಗೂ ಇದರಿಂದ ರೈಲಿನ ಸಂಚಾರ ಸಮಯದ ಮೇಲೆ ಬೀರುವ ಪರಿಣಾಮವನ್ನು ರೈಲ್ವೆ ಅಧಿಕಾರಿಗಳು ನೇರವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ. ವಾಣಿಜ್ಯ ಸಂಚಾರದ ಅಂತಿಮ ವೇಳಾಪಟ್ಟಿ ರೂಪಿಸುವ ಸಂದರ್ಭದಲ್ಲಿ ಈ ಮಾಹಿತಿಯು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ, ವಂದೇ ಭಾರತ್‌ನ ಪ್ರಾಯೋಗಿಕ ಸಂಚಾರದಲ್ಲೇ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಿ, ವಾಣಿಜ್ಯ ಸಂಚಾರ ಆರಂಭವಾದ ಬಳಿಕವೂ ಅದನ್ನು ನಿಯಮಿತ ನಿಲುಗಡೆಯಾಗಿ ಮುಂದುವರಿಸುವಂತೆ ಡಾ. ಅರುಣಾ ಶ್ಯಾಮ್ ರೈಲ್ವೆ ಮಂಡಳಿಯನ್ನು ಒತ್ತಾಯಿಸಿದ್ದಾರೆ.
























