ಸ್ಥಳೀಯ

ಪುತ್ತೂರು ಚಲೋದಲ್ಲಿ ದ್ವೇಷ ಘೋಷಣೆ, ಪ್ರಚೋದನಕಾರಿ ಭಾಷಣ ಆರೋಪ: ಪೊಲೀಸರಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆಗಸ್ಟ್ 31ರಂದು ನಡೆದ ‘ಪುತ್ತೂರು ಚಲೋ’ ‏ ವೇಳೆ ದ್ವೇಷಪೂರಿತ ಘೋಷಣೆಗಳು ಹಾಗೂ ಪ್ರಚೋದನಕಾರಿ ಭಾಷಣ ಮಾಡಲಾಗಿದೆ ಎಂದು ಆರೋಪಿಸಿ ಮಾನವ ಬಂಧುತ್ವ ವೇದಿಕೆ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದೆ.

ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಅವರು ಸೆ.4ರಂದು ಪುತ್ತೂರು ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದರ್ಬೆಯ ಜೆರಾಕ್ಸ್ ಅಂಗಡಿಯಲ್ಲಿ ಗ್ರಾಹಕ ಮತ್ತು ಮಾಲಕರ ನಡುವೆ ನಡೆದ ಗಲಾಟೆಯನ್ನು ಕೋಮು ಸಂಘರ್ಷವಾಗಿ ಪರಿವರ್ತಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪುತ್ತೂರು ಚಲೋ ಮೆರವಣಿಗೆಯಲ್ಲಿ ಕೆಲವು ಕಾರ್ಯಕರ್ತರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹಾಗೂ ದ್ವೇಷಪೂರಿತ ಘೋಷಣೆಗಳನ್ನು ಕೂಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ, ಕಾರ್ಯಕ್ರಮದ ಬಳಿಕ ನಡೆದ ಸಭೆಯಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಪೊಲೀಸ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ಇಲಾಖೆ ಮತ್ತು ಹಿಂದೂ ಸಮಾಜದ ನಡುವೆ ವೈಮನಸ್ಸು ಮೂಡಿಸುವ ರೀತಿಯಲ್ಲಿ ಭಾಷಣ ಮಾಡಲಾಗಿದೆ ಎಂಬುದು ದೂರಿನಲ್ಲಿರುವ ಆರೋಪವಾಗಿದೆ.

ಪೊಲೀಸ್ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಪೊಲೀಸ್ ಇಲಾಖೆಗೆ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಲಾಗಿದೆ ಎಂದೂ ದೂರುದಾರರು ಆರೋಪಿಸಿದ್ದಾರೆ.

ಶ್ರೀಕಾಂತ್ ಶೆಟ್ಟಿ ಅವರು ಈ ಹಿಂದೆ ಕೂಡ ಕೋಮು ಉದ್ದೇಶಿತ ಭಾಷಣ ಮಾಡಿರುವ ಆರೋಪಗಳಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಪುತ್ತೂರು ಚಲೋ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಘೋಷಣೆ ಕೂಗಿದ ಕಾರ್ಯಕರ್ತರು, ಪ್ರಚೋದನಕಾರಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಹಾಗೂ ಕಾರ್ಯಕ್ರಮ ಸಂಘಟಿಸಿದ ಸಂಘಟನೆಯ ಪ್ರಮುಖರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಮಳ ರಾಮಚಂದ್ರ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 138