ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ ಹಕೀಂ ಕೂರ್ನಡ್ಕ ಅವರ ವಿರುದ್ಧ ಶಾಸಕ ಅಶೋಕ್ ರೈ ಅವರ ಅಭಿಮಾನಿಗಳೆಂದು ಹೇಳಲಾದ ತಂಡವೊಂದು ಘೋಷಣೆ ಕೂಗಿ, ಮಾತಿನ ಚಕಮಕಿ ನಡೆಸಿದ ಘಟನೆ ಮಂಗಳವಾರ ಮಧ್ಯಾಹ್ನ ಪುತ್ತೂರು ಪ್ರೆಸ್ ಕ್ಲಬ್ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ಹಕೀಂ ಕೂರ್ನಡ್ಕ ಅವರು ಪ್ರೆಸ್ ಕ್ಲಬ್‌ನೊಳಗೆ ಸುದ್ದಿಗೋಷ್ಠಿ ನಡೆಸಲು ತೆರಳಿದ್ದ ವೇಳೆ, ಹೊರಭಾಗದಲ್ಲಿ ಕೆಲವರು ಜಮಾವಣೆಗೊಂಡು ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹಕೀಂ ಕೂರ್ನಡ್ಕ ಅವರನ್ನು ಹೊರಗೆ ಬರುವಂತೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಶಾಸಕರು, ನೆರೆದಿದ್ದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮನವಿ ಮಾಡಿಕೊಂಡರು.






















