ಪುತ್ತೂರು: ದರ್ಬೆಯಲ್ಲಿ ಆ.21ರಂದು ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಗ್ರಹಿಸಿದೆ.
ಈ ಕುರಿತು ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು, ಪ್ರಕರಣದಲ್ಲಿ ಅಂಜನಾ ಪೈ ಹಾಗೂ ಅವರ ಪುತ್ರ ಸುದರ್ಶನ್ ಪೈ ವಿರುದ್ಧ ದಾಖಲಿಸಿರುವ ಕೊಲೆ ಯತ್ನ ಪ್ರಕರಣವನ್ನು ಮರುಪರಿಶೀಲಿಸಿ ಹಿಂಪಡೆಯಬೇಕು. ಅಂಜನಾ ಪೈ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಘಟನೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಡಿ ಬಳಿ ಜಮಾಯಿಸಿರುವುದು ಹಾಗೂ ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ನಡೆಸಿರುವ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ನಿಯಾಜ್ ಮತ್ತು ನೌಷಾದ್ ಎಂಬವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಆ.31ರಂದು ‘ಪುತ್ತೂರು ಚಲೋ’
ದರ್ಬೆ ಪ್ರಕರಣದ ಹಿನ್ನೆಲೆಯಲ್ಲಿ ಹಾಗೂ ಹಿಂದೂ ಸಮಾಜದ ಜಾಗೃತಿಗಾಗಿ ಆ.31ರಂದು ‘ಪುತ್ತೂರು ಚಲೋ’ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಮೋಹನ್ ದಾಸ್ ಕಾಣಿಯೂರು ತಿಳಿಸಿದರು.
ಆ.31ರಂದು ಬೆಳಗ್ಗೆ 10 ಗಂಟೆಗೆ ದರ್ಬೆ ಐಬಿ ಬಳಿಯಿಂದ ‘ಪುತ್ತೂರು ಚಲೋ’ ಆರಂಭಗೊಳ್ಳಲಿದೆ. ಬಳಿಕ ಮೆರವಣಿಗೆಯು ಪುತ್ತೂರಿನ ಪ್ರಮುಖ ರಸ್ತೆಗಳ ಮೂಲಕ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಮಾಪನಗೊಳ್ಳಲಿದೆ ಎಂದು ಅವರು ಹೇಳಿದರು.
ಪ್ರಕರಣದಲ್ಲಿ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಆಧಾರರಹಿತವಾಗಿ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು ಹಾಗೂ ಎಲ್ಲರಿಗೂ ಸಮಾನವಾಗಿ ಕಾನೂನು ಅನ್ವಯವಾಗಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಪುತ್ತೂರು ಜಿಲ್ಲಾ ಸಹಸಂಯೋಜಕ್ ಪ್ರವೀಣ್ ಕಲ್ಲೇಗ, ಪುತ್ತೂರು ನಗರ ಸಹಸಂಯೋಜಕ್ ರೂಪೇಶ್ ಬಲ್ನಾಡ್, ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ದಯಾನಂದ್ ಅಂಬುಲ ಉಪಸ್ಥಿತರಿದ್ದರು.






















