ಪುತ್ತೂರು: ಲ್ಯಾಮಿನೇಷನ್ ಮಾಡಿಸುವ ವೇಳೆ ದಾಖಲಾತಿ ಹಾನಿಗೊಳಗಾದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32) ನೀಡಿದ ದೂರಿನಂತೆ ಮೊದಲ ಪ್ರಕರಣ ದಾಖಲಾಗಿದೆ. ಆ.21ರಂದು ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಬಂದಿದ್ದ ಅವರು ದರ್ಬೆಯ ಜನಸೇವಾ ಕೇಂದ್ರದಲ್ಲಿ ಕೆಲ ದಾಖಲಾತಿಗಳನ್ನು ಪ್ರಿಂಟ್ ಹಾಗೂ ಲ್ಯಾಮಿನೇಷನ್‌ಗಾಗಿ ನೀಡಿದ್ದರು. ಬಳಿಕ ದಾಖಲಾತಿಗಳನ್ನು ವಾಪಸ್ ಪಡೆಯುವ ವೇಳೆ ಒಂದು ದಾಖಲಾತಿ ಹಾನಿಗೊಳಗಾಗಿರುವುದು ಕಂಡುಬಂದಿದೆ ಎನ್ನಲಾಗಿದೆ.
ದಾಖಲಾತಿಯನ್ನು ಸರಿಪಡಿಸಲು ಅಥವಾ ಹೊಸ ದಾಖಲಾತಿ ಪಡೆಯಲು ₹300 ನೀಡುವಂತೆ ಕೇಳಿದ ಸಂದರ್ಭ ಕೇಂದ್ರದಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ ಪೈ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುದರ್ಶನ ಪೈ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿ ಗಲಾಟೆ ನಡೆದ ಬಳಿಕ ಗಾಯಗೊಂಡವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸುದರ್ಶನ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಕೇಂದ್ರದ ಮಾಲಕಿ ಅಂಜನಾ ಎಸ್. ಪೈ (50) ನೀಡಿದ ದೂರಿನ ಆಧಾರದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಲ್ಯಾಮಿನೇಷನ್‌ಗೆ ನೀಡಿದ್ದ ದಾಖಲಾತಿಯೊಂದು ತಾಂತ್ರಿಕ ದೋಷದಿಂದ ಹಾನಿಗೊಳಗಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಗಲಾಟೆ ಮಾಡುತ್ತಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ ಬಳಿಕ ತಾವು ಅಂಗಡಿಗೆ ತೆರಳಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಗಲಾಟೆ ಮಾಡುತ್ತಿದ್ದು, ದಾಖಲಾತಿ ನೀಡಬೇಕು ಅಥವಾ ₹10 ಸಾವಿರ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ ವೇಳೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಅಂಜನಾ ಪೈ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಫಾತಿಮತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇನ್ನು ಗಲಾಟೆಯ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿ ಮೂರನೇ ಪ್ರಕರಣವೂ ದಾಖಲಾಗಿದೆ. ಜನರನ್ನು ಚದುರಿಸುವ ವೇಳೆ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಕೆಲವರನ್ನು ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ನಿಯಾಝ್, ನೌಶಾದ್ ಹಾಗೂ ಇತರರು ತಡೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೂರು ಪ್ರಕರಣಗಳ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
































