ವಿಶೇಷ

ಪುತ್ತೂರಿನ ಯುವ ಮಹಿಳಾ ನಾಯಕಿ ವಿದ್ಯಾ ಆರ್. ಗೌರಿಗೆ ಪ್ರತಿಷ್ಠಿತ ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಅವಾರ್ಡ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿನ ಪ್ರಭಾವಿ ಯುವ ಮಹಿಳಾ ನಾಯಕಿ, ನಗರಸಭೆಯ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ಅವರಿಗೆ ‘ಕನ್ನಡಪ್ರಭ’ ಹಾಗೂ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಜಂಟಿಯಾಗಿ ಆಯೋಜಿಸಿದ ಪ್ರತಿಷ್ಠಿತ ‘ಫಾರ್ ಈಸ್ಟ್ ಏಷ್ಯಾ ಲೀಡರ್‌ಶಿಪ್ ಸಮಿಟ್ ಹಾಗೂ ಲೀಡರ್‌ಶಿಪ್ ಅವಾರ್ಡ್–2026’ ಲಭಿಸಿದೆ.

gl

ಸೆಪ್ಟೆಂಬರ್ 30ರಂದು ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಉದ್ಯಮ ಮತ್ತು ನಾಯಕತ್ವ ಸಮಾವೇಶದಲ್ಲಿ ವಿದ್ಯಾ ಗೌರಿ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಯಿತು. ಬಾಂಧವ್ಯ, ಆಡಳಿತಾತ್ಮಕ ದೂರದೃಷ್ಟಿ, ಶೈಕ್ಷಣಿಕ ಸಾಧನೆ ಹಾಗೂ ನಾಯಕತ್ವದ ಮಾದರಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಅಂತಾರಾಷ್ಟ್ರೀಯ ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳ ಉದ್ಯಮಿಗಳು, ನಾಯಕರು ಹಾಗೂ ಉನ್ನತಾಧಿಕಾರಿಗಳು ಭಾಗವಹಿಸಿದ್ದರು. ಮಲೇಷ್ಯಾದ ಭಾರತೀಯ ರಾಯಭಾರ ಕಚೇರಿಯ ರಾಜಕೀಯ ವ್ಯವಹಾರಗಳ ಕೌನ್ಸಿಲರ್ ನವೀನ್ ಕುಮಾರ್ ರಾಮಕೃಷ್ಣ, ಭೋಗನ್ ಪ್ರೊಡಕ್ಟ್ ಟ್ರೇಡಿಂಗ್ ಸಿಇಒ ಡಾ. ವೀರಪ್ಪನ್ ರಾಮನ್, ನ್ಯಾಷನಲ್ ಆರ್ಟಿಸ್ಟ್ ಫೌಂಡೇಶನ್ ಮಲೇಷ್ಯಾದ ಟ್ರಸ್ಟಿ ಡಾ. ಕನಗರಾಜನ್, ರವಿರಾಜ್ ಎಸ್‌ಡಿಎನ್‌ನ ಎಂಡಿ ರಾಜೇಂದ್ರನ್ ವೇಲಾಯುಧನ್ ನಾಯರ್, ಸ್ಮಾರ್ಟ್ ಕೀ ಇಂಟರ್‌ನ್ಯಾಷನಲ್‌ನ ಕಿರಣ್ ಉಪಾಧ್ಯಾಯ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಬಳಗದ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ, ಕನ್ನಡಪ್ರಭ ಸಂಪಾದಕ ಜೋಗಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾ ಆರ್. ಗೌರಿ ಅವರು ತಮ್ಮ ಪತಿ ರಾಮಭಟ್ ಅವರೊಂದಿಗೆ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು.

ಜನಪರ ಸೇವೆಗೆ ಸಂದ ಗೌರವ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾರ್ವಜನಿಕ ಜೀವನದಲ್ಲಿ ಆಡಳಿತ ವೈಖರಿ, ವೃತ್ತಿಪರ ಕೌಶಲ್ಯ ಹಾಗೂ ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿರುವ ವಿದ್ಯಾ ಆರ್. ಗೌರಿ, ಪುತ್ತೂರು ನಗರಸಭೆಯ ಮಾಜಿ ಉಪಾಧ್ಯಕ್ಷೆಯಾಗಿ ಹಾಗೂ 19ನೇ ವಾರ್ಡ್ ದರ್ಬೆ–ಪಾಂಗಳಾಯಿ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕಟ್ಟುನಿಟ್ಟಿನ ಆಡಳಿತ, ರಾಜಕೀಯ ಪಕ್ವತೆ, ಯೋಜನಾ ದೃಷ್ಟಿಕೋನ ಹಾಗೂ ಜನಪರ ಬದ್ಧತೆಯ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರು, ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಭಾರತೀಯ ಭೂಸೇನೆಯಲ್ಲಿ ಅಭಿಯಂತರರಾಗಿ ಸೇವೆ ಸಲ್ಲಿಸಿದ ತಂದೆ ಏತಡ್ಕ ರಾಘವ ಭಟ್ಟ ಅವರ ಸೇವಾ ಮನೋಭಾವ ಮತ್ತು ತ್ಯಾಗದ ಪರಂಪರೆ ತಮ್ಮ ಸಾರ್ವಜನಿಕ ಬದುಕಿಗೆ ಸ್ಫೂರ್ತಿಯಾಗಿದೆ ಎಂದು ವಿದ್ಯಾ ಗೌರಿ ಅವರ ಕುರಿತು ತಿಳಿಸಲಾಗಿದೆ.

ಉನ್ನತ ಶಿಕ್ಷಣ, ಆಡಳಿತಾತ್ಮಕ ಅನುಭವ

ವಿದ್ಯಾ ಗೌರಿ ಅವರು ಬಿ.ಕಾಂ, ಎಂ.ಬಿ.ಎ. (ಮಾನವ ಸಂಪನ್ಮೂಲ), ಎಂಎಫ್‌ಎ ಹಾಗೂ ಎಂಎಫ್‌ಎಲ್‌ಎಚ್‌ಆರ್‌ಡಿ (ಮಾಸ್ಟರ್ ಫೆಸಿಲಿಟೇಟರ್ ಇನ್ ಲೀಡರ್‌ಶಿಪ್ ಅಂಡ್ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್) ಸೇರಿದಂತೆ ವಿವಿಧ ಉನ್ನತ ಪದವಿಗಳನ್ನು ಪಡೆದಿದ್ದಾರೆ.

ಮಂಗಳೂರು ಶೇರು ಮಾರುಕಟ್ಟೆಯಲ್ಲಿ ಐದು ವರ್ಷಗಳ ಕಾಲ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಅವರು, ಇಂಡಸ್ ಕಾಲೇಜು ಹಾಗೂ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಸಂದರ್ಶಕ ಪ್ರಾಧ್ಯಾಪಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಡೆಕ್ಕನ್ ಹೆರಾಲ್ಡ್ ಸಂಸ್ಥೆಯ DHIE ಉಪಕ್ರಮದಡಿ ಪುತ್ತೂರು ಮತ್ತು ಮಂಗಳೂರಿನ 20ಕ್ಕೂ ಹೆಚ್ಚು ಶಾಲೆಗಳಲ್ಲಿ ಮೃದು ಕೌಶಲ್ಯ ತರಗತಿಗಳನ್ನು ನಡೆಸಿದ್ದಾರೆ.

ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘದ VCET ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕಿಯಾಗಿ ಹಾಗೂ ವಿವೇಕಾನಂದ ವಿದ್ಯಾರ್ಥಿ ನಿಲಯದ ನಿರ್ವಹಣಾ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ

1991–92ರಲ್ಲಿ ರೋಟರಿ–ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅತ್ಯುತ್ತಮ ಅಧ್ಯಕ್ಷೆ ಪ್ರಶಸ್ತಿ ಸೇರಿದಂತೆ 13 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗಾಗಿ ‘ವಸ್ತ್ರ ನಿಧಿ’ ಹಾಗೂ ಶಾಲಾ ಮಕ್ಕಳಿಗಾಗಿ ‘ಡೀವರ್ಮಿಂಗ್ ಕ್ಯಾಂಪ್’ ಆರಂಭಿಸಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಹಾಯಕ ಜಿಲ್ಲಾ ಆಯುಕ್ತೆ ಹಾಗೂ ಕಾರ್ಯದರ್ಶಿಯಾಗಿ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ಮಕ್ಕಳು ಹಾಗೂ ಶಿಕ್ಷಕರ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಕೋವಿಡ್ ಅವಧಿಯಲ್ಲಿ ಮಕ್ಕಳಿಗಾಗಿ ಆನ್‌ಲೈನ್ ಸ್ಕೌಟ್ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧಿಯಾ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಬಾಲವನ ಅಭಿವೃದ್ಧಿ ಸಮಿತಿಯ ಸದಸ್ಯೆಯಾಗಿಯೂ ಸುಮಾರು 20 ವರ್ಷ ಸೇವೆ ಸಲ್ಲಿಸಿದ್ದಾರೆ.

ಆರೋಗ್ಯ, ಮಾನವೀಯ ಸೇವೆಯಲ್ಲೂ ಕೊಡುಗೆ

2018ರಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯೆಯಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು, 12 ಯಂತ್ರಗಳ ಡಯಾಲಿಸಿಸ್ ಘಟಕ, ಆಕ್ಸಿಜನ್ ಘಟಕ, ಸೌರಶಕ್ತಿ ವ್ಯವಸ್ಥೆ ಹಾಗೂ 300 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸಂಬಂಧಿಸಿದಂತೆ 5 ಎಕರೆ ಜಾಗ ಮತ್ತು ಬ್ಲೂಪ್ರಿಂಟ್ ಸಿದ್ಧಪಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಲಾಗಿದೆ.

ಸ್ವತಃ 20 ಬಾರಿ ರಕ್ತದಾನ ಮಾಡಿರುವ ಅವರು, ಕೌನ್ಸೆಲರ್ ಆಗಿ ಕುಟುಂಬಗಳು, ಯುವಕರು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರಿಗೆ ‘ಸಮಾಜ ಸೇವಾ ತಿಲಕ’ ಹಾಗೂ ‘ಸರ್ವೋತ್ತಮ ಸೇವಕಿ’ ಎಂಬ ಬಿರುದುಗಳೂ ಲಭಿಸಿವೆ.

ಸರ್ಕಾರಿ ಶಾಲೆ ನವೀಕರಣಕ್ಕೆ ಕೊಡುಗೆ

ಸಾರ್ವಜನಿಕರು ಹಾಗೂ ವಿವಿಧ ಸಂಘ–ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ, 65 ವರ್ಷ ಹಳೆಯ ಪರ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸುಮಾರು ₹13 ಲಕ್ಷ ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಿಸುವಲ್ಲಿ ವಿದ್ಯಾ ಗೌರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಾಲೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವ ಕಾರ್ಯಕ್ಕೆ ಅವರು ಕೈಜೋಡಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯ

ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ವಿದ್ಯಾ ಗೌರಿ ಪ್ರಸ್ತುತ ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಪುತ್ತೂರಿನ ಹಲವು ಬೂತ್‌ಗಳು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ 20 ಬೂತ್‌ಗಳಲ್ಲಿ ಎಸ್‌ಐಆರ್ ಅಭಿಯಾನ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮದ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಜನಧನ್ ಖಾತೆ, ಪ್ರಧಾನಮಂತ್ರಿ ಜನೌಷಧಿ ಯೋಜನೆ, ಉಜ್ವಲ ಯೋಜನೆ, ಬೇಟಿ ಬಚಾವೋ–ಬೇಟಿ ಪಢಾವೋ, ಪ್ರಧಾನಮಂತ್ರಿ ಸ್ವನಿಧಿ ಹಾಗೂ ವಿಶ್ವಕರ್ಮ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.

ನಗರಸಭಾ ಪ್ರತಿನಿಧಿಯಾಗಿ ಅಭಿವೃದ್ಧಿ ಕಾರ್ಯ

ನಗರಸಭಾ ಉಪಾಧ್ಯಕ್ಷೆ ಹಾಗೂ ವಾರ್ಡ್ ಪ್ರತಿನಿಧಿಯಾಗಿ ಅಮೃತ ನಗರೋತ್ಥಾನ, 14ನೇ ಮತ್ತು 15ನೇ ಹಣಕಾಸು ಯೋಜನೆ, ಎಸ್‌ಎಫ್‌ಸಿ, ಶಾಸಕರು ಹಾಗೂ ಸಂಸದರ ಅನುದಾನಗಳಡಿ ₹2 ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಿದ್ದಾರೆ.

ಕಾಂಕ್ರೀಟ್ ಮತ್ತು ಇಂಟರ್‌ಲಾಕ್ ರಸ್ತೆಗಳು, ಚರಂಡಿ, ತಡೆಗೋಡೆ, ಹೈಮಾಸ್ಟ್ ದೀಪಗಳು ಹಾಗೂ ಜಲಸಿರಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳು ಇದರಲ್ಲಿ ಸೇರಿವೆ.

ಸಾಮರಸ್ಯದ ಸಂದೇಶ ಸಾರಿದ ಕಾರ್ಯ

ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಪುತ್ತೂರಿನ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿ ನವರಾತ್ರಿಯ ಸಂದರ್ಭದಲ್ಲಿ ಕನ್ಯಾಪೂಜೆ, ದೀಪಾವಳಿ ಸಂದರ್ಭದಲ್ಲಿ ತುಳಸಿ ಪೂಜೆ ಸೇರಿದಂತೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಸ್ಥಳೀಯರೊಂದಿಗೆ ನಡೆಸಿದರು.

ಸ್ಥಳೀಯರೊಂದಿಗೆ ಸಹಭೋಜನ ನಡೆಸುವ ಮೂಲಕ ಸಾಮಾಜಿಕ ಅಂತರ ಹಾಗೂ ಅಸ್ಪೃಶ್ಯತೆಯಂತಹ ಮನೋಭಾವಗಳನ್ನು ದೂರ ಮಾಡುವ ಪ್ರಯತ್ನ ನಡೆಸಿದರು. ಈ ಮೂಲಕ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಾಮರಸ್ಯ ಬೆಳೆಸುವ ಕಾರ್ಯಕ್ಕೆ ಒತ್ತು ನೀಡಿದರು.

ವಿದ್ಯಾ ಆರ್. ಗೌರಿ ಅವರ ಸಾಮಾಜಿಕ, ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ರಾಜಕೀಯ ಕ್ಷೇತ್ರಗಳ ಸೇವೆಯನ್ನು ಗುರುತಿಸಿ ನೀಡಲಾಗಿರುವ ಈ ಅಂತಾರಾಷ್ಟ್ರೀಯ ಗೌರವವು ಪುತ್ತೂರಿಗೆ ಹೆಮ್ಮೆಯ ಸಂಗತಿಯಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪಶುಪತಿ ಲೈಟ್ಸ್‌ನಲ್ಲಿ ‘ಗಾಳಿ–ಬೆಳಕು 2026’ ಸಾಲು ಸಾಲು ಹಬ್ಬಗಳ ಸಂಭ್ರಮಕ್ಕೆ ಮುಂಗಡ ಬುಕ್ಕಿಂಗ್‌ಗೂ ಭರ್ಜರಿ ಆಫರ್!

ಪುತ್ತೂರು: ಪುತ್ತೂರಿನ ಜಿಎಲ್ ಟ್ರೇಡ್ ಸೆಂಟರ್‌ನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್,…