ಪುತ್ತೂರು: ಪುತ್ತೂರಿನ ಹೆಸರಾಂತ ಸ್ವರ್ಣೋದ್ಯಮಿ ದಿ. ಜಿ.ಎಲ್. ಆಚಾರ್ಯರ ಪುತ್ರ ಹಾಗೂ ಖ್ಯಾತ ಉದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ಅವರು ಶಿವಳ್ಳಿ ಸಂಪದ ಪುತ್ತೂರು ಮತ್ತು ಕಡಬ ತಾಲೂಕು ಇದರ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಲರಾಮ ಆಚಾರ್ಯರು, ಜಿ.ಎಲ್. ಆಚಾರ್ಯ ಜ್ಯುವೆಲ್ಲರಿ ಸಂಸ್ಥೆಯ ಮೂಲಕ ಉದ್ಯಮ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಆಯ್ಕೆಯಿಂದ ಪುತ್ತೂರು–ಕಡಬ ತಾಲೂಕು ಶಿವಳ್ಳಿ ಸಂಪದದ ಸಂಘಟನಾ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತಷ್ಟು ಬಲ ದೊರೆತಂತಾಗಿದೆ.
ಧರ್ಮ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲೂ ವಿಶೇಷ ಆಸಕ್ತಿ ಹೊಂದಿರುವ ಬಲರಾಮ ಆಚಾರ್ಯರು ‘ವಿಜಯರತ್ನ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ನೂತನ ಗೌರವಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿವಳ್ಳಿ ಸಂಪದದ ತಾಲೂಕು ಅಧ್ಯಕ್ಷ ಸತೀಶ್ ಮುಡಂಬಡಿತಾಯ, ಕಾರ್ಯದರ್ಶಿ ಬಾಲಚಂದ್ರ ಮುಚ್ಚಿಂತಾಯ, ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ., ಕೋಶಾಧಿಕಾರಿ ಕೃಷ್ಣರಾಜ ಎರಕಡಿತಾಯ, ನಿಕಟಪೂರ್ವ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ಪೂರ್ವ ಅಧ್ಯಕ್ಷ ಕೆ.ಆರ್. ಆಚಾರ್ಯ, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ನೆಲ್ಯಾಡಿ ವಲಯದ ರವಿಪ್ರಸಾದ್ ಆಚಾರ್ಯ ಸೇರಿದಂತೆ ಪದಾಧಿಕಾರಿಗಳು ಬಲರಾಮ ಆಚಾರ್ಯರ ಕಚೇರಿಗೆ ತೆರಳಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಲರಾಮ ಆಚಾರ್ಯರು, “ಮೂರು ದಶಕಗಳನ್ನು ಪೂರೈಸಿರುವ ಶಿವಳ್ಳಿ ಸಂಪದ ಪುತ್ತೂರಿನ ಸ್ಥಾಪಕ ಅಧ್ಯಕ್ಷರು ನನ್ನ ತಂದೆ ಜಿ.ಎಲ್. ಆಚಾರ್ಯರು ಎಂಬುದನ್ನು ನೆನಪಿಸಿಕೊಂಡಾಗ, ಮತ್ತೆ ಈ ಸಂಸ್ಥೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಹಿಂದೆ ಶಿವಳ್ಳಿ ಸಂಪದ ಪುತ್ತೂರು–ಕಡಬದ ಗೌರವಾಧ್ಯಕ್ಷರಾಗಿದ್ದ ಹಿರಿಯ ವಕೀಲ ಹಾಗೂ ಸಾಮಾಜಿಕ ಮುಂದಾಳು ಎನ್. ಸುಬ್ರಹ್ಮಣ್ಯ ಕೊಳತ್ತಾಯ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಗೌರವಾಧ್ಯಕ್ಷರ ಸ್ಥಾನ ತೆರವಾಗಿತ್ತು. ಇದೀಗ ಜಿ.ಎಲ್. ಬಲರಾಮ ಆಚಾರ್ಯರ ಆಯ್ಕೆಯೊಂದಿಗೆ ಶಿವಳ್ಳಿ ಸಂಪದದ ಮುಂದಿನ ಕಾರ್ಯಚಟುವಟಿಕೆಗಳಿಗೆ ಹೊಸ ಹುರುಪು ದೊರೆತಿದೆ.






















