ಉಜಿರೆ : ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಮಹಿಳೆಯರಿಗಾಗಿ ಆಯೋಜಿಸಿರುವ 38ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಸೆ.10ರಂದು ಉಜಿರೆ ಗ್ರಾಮ ಪಂಚಾಯತ್‌ನ ಸಂಜೀವಿನಿ ಕಟ್ಟಡದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಬೆಳ್ತಂಗಡಿ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ (ರಿ.), ಮಹಾತ್ಮಾ ಗಾಂಧಿ ಗ್ರಾಮ ಪಂಚಾಯತ್ ಉಜಿರೆ ಹಾಗೂ ಶ್ರೀ ದುರ್ಗಾಮಾತೃ ಮಂಡಳಿ, ಕನ್ಯಾಡಿ ಸಹಭಾಗಿತ್ವದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.
ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಘುರಾಮ ಶೆಟ್ಟಿ ‘ಸಾಧನಾ’ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಟೈಲರಿಂಗ್ ತರಬೇತಿ ಕೇವಲ ಒಂದು ಕಲೆ ಮಾತ್ರವಲ್ಲದೆ, ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಸಬಲೀಕರಣಕ್ಕೆ ಉತ್ತಮ ಅವಕಾಶವಾಗಿದೆ. ತರಬೇತಿಯ ಮೂಲಕ ಹೊಸ ಕೌಶಲ್ಯಗಳನ್ನು ಕಲಿತು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಶುಭ ಹಾರೈಸಿದರು.
ಸೇವಾಭಾರತಿ ಅಧ್ಯಕ್ಷ ಹಾಗೂ ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ಮಾತನಾಡಿ, ಯಶಸ್ಸಿಗೆ ದೊಡ್ಡ ಅವಕಾಶಗಳಿಗಿಂತ ಕಲಿಯುವ ಮನಸ್ಸು ಹಾಗೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಮುಖ್ಯ. ಆದ್ದರಿಂದ ಈ ತರಬೇತಿಯನ್ನು ಉತ್ತಮ ಅವಕಾಶವಾಗಿ ಸ್ವೀಕರಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಉದ್ಯಮಶೀಲರಾಗಲು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಂದೆಯೂ ತಮ್ಮ ಬೆಂಬಲ ಇರಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪವತಿ, ಬೆಳ್ತಂಗಡಿ ತಾಲೂಕು ಕೃಷಿಯೇತರ ವ್ಯವಸ್ಥಾಪಕ ನಿತೀಶ್ ಉಜಿರೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷೆ ಮಮತಾ ಬಿ., ಟೈಲರಿಂಗ್ ತರಬೇತುದಾರೆ ಲಲಿತಾ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 66 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಬೆಳ್ತಂಗಡಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಶಾಶ್ವಿತ ಸ್ವಾಗತಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಭಾಗೀರಥಿ ಧನ್ಯವಾದ ಸಲ್ಲಿಸಿದರು.

























