tamanvi
ವಿಶೇಷಸ್ಥಳೀಯ

ಪುತ್ತೂರು ದಸರಾಕ್ಕೆ ಅದ್ದೂರಿ ಚಾಲನೆ: 92ನೇ ವರ್ಷದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ, ಶಾರದೋತ್ಸವ ಹಾಗೂ ಚಂಡಿಕಾಹೋಮದ ಪ್ರಯುಕ್ತ ನಡೆಯಲಿರುವ 92ನೇ ವರ್ಷದ ಪುತ್ತೂರು ದಸರಾ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡುವ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆಯನ್ನು ಸೆ.8ರಂದು ಬಿಡುಗಡೆಗೊಳಿಸಲಾಯಿತು.

ದ್ವಾರಕಾ ಕನ್‌ಸ್ಟ್ರಕ್ಷನ್‌ನ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಆಮಂತ್ರಣ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಯಾವುದೇ ಕಾರ್ಯಕ್ರಮ 92 ವರ್ಷಗಳ ಕಾಲ ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ವಿಶೇಷ ಎಂದರು. ವರ್ಷಗಳು ಕಳೆದಂತೆ ಕಾರ್ಯಕ್ರಮಗಳ ಮೇಲಿನ ಜನರ ಆಸಕ್ತಿ ಕಡಿಮೆಯಾಗುವುದು ಸಾಮಾನ್ಯ. ಆದರೆ ಒಂಬತ್ತು ದಶಕಗಳ ಬಳಿಕವೂ ಪುತ್ತೂರು ದಸರಾ ಮತ್ತಷ್ಟು ವಿಜೃಂಭಣೆಯಿಂದ ನಡೆಯುತ್ತಿರುವುದು ಅದರ ಜೀವಂತಿಕೆ ಮತ್ತು ಪರಂಪರೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಪುತ್ತೂರಿನಲ್ಲೂ ದಸರಾ ನಡೆಯಬೇಕು ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಕೆದಂಬಾಡಿಗುತ್ತು ಸೀತಾರಾಮ ರೈ ಹಾಗೂ ತಂಡ ಉತ್ಸವಕ್ಕೆ ಚಾಲನೆ ನೀಡಿದ್ದು, ಈ ಪರಂಪರೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು. ಪುತ್ತೂರು ದಸರಾ ವಿಶಿಷ್ಟ, ವಿಭಿನ್ನ ಹಾಗೂ ಸಾಂಸ್ಕೃತಿಕ ಕಲೆಯನ್ನು ಪ್ರದರ್ಶಿಸುವ ಉತ್ಸವವಾಗಿ ರೂಪುಗೊಳ್ಳುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕಾರಣವಾಗಲಿ. ಪುತ್ತೂರಿನ ಜನತೆಗೆ ಸಂತಸದ ಮೆರುಗು ನೀಡಲಿ ಎಂದು ಶುಭ ಹಾರೈಸಿದರು.

ಪುತ್ತೂರು ದಸರಾ ನಾಡಹಬ್ಬವಾಗಲಿ

ಉತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ‘ಪುತ್ತೂರು ಶಾರದೋತ್ಸವ’ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಈ ವರ್ಷದಿಂದ ‘ಪುತ್ತೂರು ದಸರಾ’ ಎಂಬ ನಾಮಧೇಯದೊಂದಿಗೆ ಅದ್ದೂರಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಪುತ್ತೂರು ದಸರಾವನ್ನು ನಾಡಹಬ್ಬವಾಗಿ ಆಚರಿಸಲು ಭಕ್ತಾದಿಗಳು ಹಾಗೂ ಮಹಾಜನತೆಯ ಸಹಕಾರ ಅಗತ್ಯ. ಕರ್ನಾಟಕ ಮತ್ತು ಕೇರಳ ಸೇರಿದಂತೆ ವಿವಿಧ ಜಿಲ್ಲೆಗಳ ಕಲಾತಂಡಗಳ ಭಾಗವಹಿಸುವಿಕೆಯೊಂದಿಗೆ ದೇವಿಯ ವೈಭವದ ಶೋಭಾಯಾತ್ರೆ ನಡೆಸುವ ಸಂಕಲ್ಪವಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ಪಟಾಕಿ ಹಾಗೂ ಡಿಜೆ ಕಾರ್ಯಕ್ರಮಗಳಿಗೆ ಒತ್ತು ನೀಡದೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪುತ್ತೂರು ದಸರಾ ರಾಜ್ಯಾದ್ಯಂತ ಪ್ರಸಿದ್ಧಿ ಪಡೆಯಬೇಕು ಎಂಬುದು ನಮ್ಮ ಆಶಯ. ದೇವಿಯ ಸಂಪೂರ್ಣ ಆಶೀರ್ವಾದದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಶಾರದಾ ಪ್ರತಿಷ್ಠೆಯ ಬಳಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಂಡಿಕಾಹೋಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. 92 ವರ್ಷಗಳ ಈ ಉತ್ಸವವನ್ನು ದೇಶ-ವಿದೇಶಗಳ ಜನರು ವೀಕ್ಷಿಸುವ ರೀತಿಯಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸೀತಾರಾಮ ರೈ ತಿಳಿಸಿದರು.

ಈ ಸಂದರ್ಭದಲ್ಲಿ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ತಮನ್ನಿ ಸಿಲ್ಕ್ ಮಾಲಕಿ ಮಾಲಶ್ರೀ, ಅರಣ್ಯಾಧಿಕಾರಿ ರಾಮಕೃಷ್ಣ ರಾವ್, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿದ್ಯಾಧರ್ ಜೈನ್, ಸ್ವಾಗತ್ ಹೋಟೆಲ್‌ನ ಸೂರಜ್ ಶೆಟ್ಟಿ, ಸಂತೋಷ್ ರೈ ಕೈಕಾರ, ರಂಜಿತ್ ಬಂಗೇರ, ಶಶಿಧರ್ ನಾಯಕ್, ಪ್ರವೀಣ್, ಶ್ರೀಧರ್ ಪಟ್ಲ, ವಿಶ್ವನಾಥ್ ಕುಲಾಲ್, ನವೀನ್ ಕುಲಾಲ್, ಕೃಷ್ಣ ಎಂ. ಅಳಿಕೆ, ನಾಗೇಂದ್ರ ಬಾಳಿಗ, ನಿರಂಜನ್ ಮಾನ್ಯ, ಸುರೇಶ್ ರೈ, ರತ್ನಾಕರ ನಾಯಕ್, ವಕೀಲ ಚಿನ್ಮಯ್ ರೈ, ಮಂದಿರ ಅರ್ಚಕ ತಿರುಮಲೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್, ಜತೆ ಕಾರ್ಯದರ್ಶಿ ಜಲಜಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 141