ಬೆಳ್ಳಾರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ ನಡೆಸಿದ ಘಟನೆ ಸೆ. 6ರಂದು ಮಧ್ಯಾಹ್ನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ನಡೆದಿದೆ.
ಮುಕ್ಕೂರು ನಿವಾಸಿ ಗಣೇಶ (38) ಹಲ್ಲೆ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗಣೇಶ ತನ್ನ ಪತ್ನಿ ವಿನಿತಾ (32) ಹಾಗೂ ಆಕೆಯ ತಾಯಿ ಕುಸುಮಾ (50) ಅವರಿಗೆ ಹರಿತವಾದ ಸಾಧನದಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯಿಂದ ಇಬ್ಬರಿಗೂ ರಕ್ತಗಾಯವಾಗಿದ್ದು, ಗಾಯಗೊಂಡ ವಿನಿತಾ ಹಾಗೂ ಕುಸುಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಆರೋಪಿ ಗಣೇಶ ಇಲಿಪಾಷಾಣ ಸೇವಿಸಿರುವುದಾಗಿ ತಿಳಿದುಬಂದಿದ್ದು, ಆತನನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





















