ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ ಶಿಶು ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಸೆ.4ರಂದು ನಡೆದ ಕಾರ್ಯಕ್ರಮದಲ್ಲಿ ಸುಮಾರು 1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರು ಭಾಗವಹಿಸಿ ವೈಭವದ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕಿರೀಟ ಧರಿಸಿ, ಕೈಯಲ್ಲಿ ಕೊಳಲು ಹಿಡಿದು ಕೃಷ್ಣ-ರಾಧೆಯ ವೇಷದಲ್ಲಿ ಕಂಗೊಳಿಸಿದ ಪುಟಾಣಿಗಳು ನೋಡುಗರ ಗಮನ ಸೆಳೆದರು.
ಶಿಶು ಮಂದಿರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಾರ್ಥನೆ, ಕೃಷ್ಣ-ರಾಧೆಯರ ನೋಂದಣಿ ಹಾಗೂ ಭಜನೆ ನಡೆಯಿತು. ಬಳಿಕ ಬಾಲಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ತೊಟ್ಟಿಲ ಸಂಭ್ರಮದಲ್ಲಿ ಕುಂಜೂರುಪಂಜದ ಮಹೇಶ್ ಮತ್ತು ಗೀತಾ ದಂಪತಿಯ ನಾಲ್ಕೂವರೆ ತಿಂಗಳ ಮಗು ವಿಯಾನ್ ಈಶನನ್ನು ತೊಟ್ಟಿಲಲ್ಲಿ ಮಲಗಿಸಿ, ಆರತಿ ಬೆಳಗಿ, ಬೆಣ್ಣೆ ತಿನ್ನಿಸಲಾಯಿತು. ಮಾತೃ ಮಂಡಳಿಯ ಸದಸ್ಯರು ಹಾಗೂ ಮಾತೆಯರು ಬಾಲಕೃಷ್ಣನ ತೊಟ್ಟಿಲು ತೂಗಿ ಜೋಗುಳ ಹಾಡಿದರು.
ಕೃಷ್ಣ-ರಾಧೆಯರ ವೈಭವದ ಶೋಭಾಯಾತ್ರೆ
ಬಾಲಕೃಷ್ಣನ ತೊಟ್ಟಿಲ ಸಂಭ್ರಮದ ಬಳಿಕ ಶಿಶು ಮಂದಿರದ ಆವರಣದಿಂದ ಹೊರಟ ಶೋಭಾಯಾತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಆರ್‌ಎಸ್‌ಎಸ್ ಮುಖಂಡ ಅಚ್ಚುತ್ತ ನಾಯಕ್ ಧ್ವಜ ಹಸ್ತಾಂತರಿಸಿದರು.
ಶಿಶು ಮಂದಿರದಿಂದ ಆರಂಭಗೊಂಡ ಮೆರವಣಿಗೆ ಚೇತನ ಆಸ್ಪತ್ರೆ ಮುಂಭಾಗದ ರಸ್ತೆ, ಕೋರ್ಟ್ ರಸ್ತೆ ಹಾಗೂ ಮುಖ್ಯ ರಸ್ತೆಯ ಮೂಲಕ ಸಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಸಮಾಪನಗೊಂಡಿತು.
ಸಾವಿರಾರು ಪುಟಾಣಿ ಕೃಷ್ಣ-ರಾಧೆಯರೊಂದಿಗೆ ಪೋಷಕರು ಕೂಡ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕೆಲ ಮಕ್ಕಳು ಕೊಳಲು ಹಿಡಿದು ಕುಣಿದು ಸಂಭ್ರಮಿಸಿದರೆ, ಇನ್ನೂ ಕೆಲವರ ಆಟ-ತುಂಟಾಟಗಳು ನೋಡುಗರನ್ನು ಆಕರ್ಷಿಸಿದವು.
ಲಕ್ಷ್ಮೀದೇವಿ ಬೆಟ್ಟದ ಶ್ರೀಕೃಷ್ಣ ಸಾರಥಿಯ ಸ್ಥಬ್ಧಚಿತ್ರ ವಿಶೇಷ ಆಕರ್ಷಣೆಯಾಗಿತ್ತು. ಕೃಷ್ಣನಾಗಿ ಲಕ್ಷ್ಮೀ ಅಹನ್ ಹಾಗೂ ಅರ್ಜುನನಾಗಿ ಅನ್ಯಲಕ್ಷ್ಮೀ ಭಾಗವಹಿಸಿದ್ದರು. ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಸಿಬಿಎಸ್‌ಇ ಹಾಗೂ ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ನೃತ್ಯ, ಚೆಂಡೆ ವಾದನ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಶೋಭಾಯಾತ್ರೆ ಸಾಗಿತು.
ಮಾರ್ಗಮಧ್ಯೆ ಪುಟಾಣಿ ರಾಧೆ-ಕೃಷ್ಣರಿಗೆ ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಯಿತು. ಮುಳಿಯ ಜ್ಯುವೆಲ್ಸ್ ವತಿಯಿಂದ ಮಕ್ಕಳಿಗೆ ಉಡುಗೊರೆ ನೀಡಿ ಪ್ರೋತ್ಸಾಹಿಸಲಾಯಿತು. ಶೋಭಾಯಾತ್ರೆಯ ಆರಂಭ ಮತ್ತು ಸಮಾಪನದ ಬಳಿಕ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
‘ಶಿಶು ಮಂದಿರ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ವಿಶೇಷ ಸಂಸ್ಥೆ’
ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಶ್ರೀಕೃಷ್ಣ ಲೋಕದ ಗುರು. ಭಗವದ್ಗೀತೆಯ ಮೂಲಕ ಮಾನವಕುಲಕ್ಕೆ ಜೀವನದ ಸಾರವನ್ನು ಬೋಧಿಸಿದ ಪರಮಶ್ರೇಷ್ಠ ಗುರು ಎಂದರು.
ವಿವೇಕಾನಂದ ಶಿಶು ಮಂದಿರದ ಮೂಲಕ ನಡೆಯುವ ಕೃಷ್ಣಲೋಕ ಕಾರ್ಯಕ್ರಮವು ತಾಲೂಕಿನಲ್ಲಿ ದೊಡ್ಡ ಕಾರ್ಯಕ್ರಮವಾಗಿದೆ. ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಹಿಂದೂ ಸಂಸ್ಕೃತಿ ಹಾಗೂ ನೈತಿಕ ಶಿಕ್ಷಣ ನೀಡುವ ಕಾರ್ಯ ಇಲ್ಲಿ ನಡೆಯುತ್ತಿದೆ. ಮಕ್ಕಳ ನಡವಳಿಕೆಯಲ್ಲಿಯೇ ಶಿಶು ಮಂದಿರದ ಶಿಕ್ಷಣವನ್ನು ಗುರುತಿಸಬಹುದು ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
‘ಧರ್ಮಕ್ಕೆ ಚ್ಯುತಿಯಾದಾಗ ರಾಜಕೀಯ ಮರೆತು ವಿರೋಧಿಸಬೇಕು’
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಮಾತನಾಡಿ, ಧಾರ್ಮಿಕ ಆಚರಣೆಗಳ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಧರ್ಮ ಎನ್ನುವುದು ಮೂಲ ನಂಬಿಕೆಯಾಗಿದ್ದು, ಅದನ್ನು ಮೂಢನಂಬಿಕೆಯೊಂದಿಗೆ ಸಮೀಕರಿಸಬಾರದು. ಧರ್ಮಕ್ಕೆ ಚ್ಯುತಿ ಉಂಟಾದಾಗ ರಾಜಕೀಯವನ್ನು ಬದಿಗಿಟ್ಟು ವಿರೋಧಿಸಬೇಕು ಎಂದು ಹೇಳಿದರು.
‘ಭಗವದ್ಗೀತೆ ಮನಸ್ಸಿಗೆ ಧೈರ್ಯ ನೀಡುವ ಶಸ್ತ್ರ’
ದಿಕ್ಸೂಚಿ ಭಾಷಣ ಮಾಡಿದ ಪೂರ್ಣಾತ್ಮರಾಮ ಈಶ್ವರಮಂಗಲ ಮಾತನಾಡಿ, ಕೃಷಿ ಭೂಮಿ ಕೇವಲ ಮಾರಾಟದ ಸೈಟ್‌ಗಳಲ್ಲ, ಅದು ಮಾತೃಭೂಮಿ. ನಮ್ಮ ಹಿರಿಯರು ಉಳಿಸಿಕೊಂಡ ಭೂಮಿಯನ್ನು ಮುಂದಿನ ಪೀಳಿಗೆಗೂ ಉಳಿಸಬೇಕು ಎಂದರು.
ಭಗವದ್ಗೀತೆ ದುಡಿಮೆಗೆ ಪ್ರೇರಣೆ ನೀಡುವ ಗ್ರಂಥವಾಗಿದ್ದು, ಅದು ಮನಸ್ಸಿಗೆ ಧೈರ್ಯ ನೀಡುವ ಶಸ್ತ್ರವಾಗಿದೆ. ಶಿಶು ಮಂದಿರದ ಮೂಲಕ ಮಕ್ಕಳಿಗೆ ಕೃಷ್ಣನ ಸಂದೇಶ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ನೀಡುವ ಕಾರ್ಯ ನಡೆಯುತ್ತಿದೆ ಎಂದರು.
‘ಭಾರತೀಯ ಪರಂಪರೆಯ ಜೀವಂತ ಚಿತ್ರಣ’
ಮುಖ್ಯ ಅತಿಥಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಆಡಳಿತ ನಿರ್ದೇಶಕ ಚೇತನ್ ಪ್ರಕಾಶ್ ಕಜೆ ಮಾತನಾಡಿ, ಕೃಷ್ಣಲೋಕ ಕಾರ್ಯಕ್ರಮದ ಮೂಲಕ ಭಾರತೀಯ ಪರಂಪರೆಯ ಜೀವಂತ ಚಿತ್ರಣವನ್ನು ನೀಡಲಾಗುತ್ತಿದೆ ಎಂದರು.
ಯುವಕರ ನಿಸ್ವಾರ್ಥ ಸೇವೆಯ ಮೂಲಕ ಕಳೆದ 27 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಇಂತಹ ಕಾರ್ಯಕ್ರಮಗಳು ಸಮಾಜದ ಮೌಲ್ಯವರ್ಧನೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ವಿದ್ಯಾದಾನಕ್ಕೆ ಹೊಸ ಮೈಲುಗಲ್ಲು
ಶ್ರೀಕೃಷ್ಣಲೋಕ ಸಮಿತಿಯ ಗೌರವಾಧ್ಯಕ್ಷ ಪ್ರಸನ್ನ ದರ್ಬೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 27 ವರ್ಷಗಳಿಂದ ಕೃಷ್ಣಲೋಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಳಿಕೆಯಾಗುವ ಮೊತ್ತವನ್ನು ದೇವಸ್ಥಾನದ ಅನ್ನಯೋಜನೆಗೆ ಬಳಸಲಾಗುತ್ತಿತ್ತು. ಈ ಬಾರಿ ಸಮಾಜದಿಂದ ಸಂಗ್ರಹವಾದ ಮೊತ್ತವನ್ನು ದೇವಸ್ಥಾನದ ಹೆಸರಿನಲ್ಲಿ ಠೇವಣಿಯಿಟ್ಟು, ಅದರಿಂದ ಬರುವ ಬಡ್ಡಿ ಮೊತ್ತದಲ್ಲಿ ವಿದ್ಯಾದಾನ ಮಾಡುವ ಹೊಸ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರಾಜ್‌ಗೋಪಾಲ್ ಭಟ್, ಸಂಚಾಲಕ ಅಕ್ಷಯ ಕುಮಾರ್, ಕೋಶಾಧಿಕಾರಿ ಚಂದ್ರಪ್ರಭಾ ಸತೀಶ್, ಕೃಷ್ಣಲೋಕ ಸಮಿತಿ ಜೊತೆ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಹಾಗೂ ಕೋಶಾಧಿಕಾರಿ ರಕ್ಷಾ ಎಸ್.ಆರ್ ಉಪಸ್ಥಿತರಿದ್ದರು.
ಶ್ರೀಕೃಷ್ಣಲೋಕ ಸಮಿತಿ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿದರು. ಪ್ರಧಾನ ಬ್ರಿಜೇಶ್ ರೈ ಸಣಂಗಲ ವಂದಿಸಿದರು. ವಿಶ್ವಹಿಂದೂ ಪರಿಷತ್ ನಗರ ಪ್ರಖಂಡದ ಅಧ್ಯಕ್ಷ ದಾಮೋದರ ಪಾಟಾಳಿ ಹಾಗೂ ಲಕ್ಷ್ಮೀಪ್ರಭಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕೃಷ್ಣ-ರಾಧೆಯ ವೇಷದಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಬಳಿಕ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
























