ಪುತ್ತೂರು: ರೈತರ ಕ್ರೀಡೆಯಾದ ಕಂಬಳವನ್ನು ರಾಜ್ಯಕ್ಕೆ ತೋರಿಸುವ ಉದ್ದೇಶದಿಂದ ನಾಡಹಬ್ಬ ದಸರಾದಲ್ಲಿ ಕಂಬಳ ಕೂಟ ಅಕ್ಟೋಬರ್ 18ರಂದು ನಡೆಯಲಿದೆ ಎಂದು ರೂಪೇಶ್ ರೈ ಅಲಿಮಾರ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತಾಪಿ ವರ್ಗ ಸೇರಿಕೊಂಡು ಮೈಸೂರು ದಸರಾದಲ್ಲಿ ಗೊತ್ತು ಪಡಿಸಿದ ಪ್ರದೇಶದಲ್ಲಿ ಕಂಬಳದ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಮೈಸೂರು ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಲ್ಲಿ ವ್ಯವಸ್ಥೆಗಳು ನಡೆಯುತ್ತಿವೆ ಎಂದರು.
ವಿನೋದ್ ಭಟ್ ಪಾದೆಕಲ್ಲು ಮಾತನಾಡಿ, ರಾಜವಂಶಸ್ಥರ ಕಾಲದಲ್ಲೇ ಕಂಬಳವನ್ನು ಆಡಿಸಲಾಗುತ್ತಿತ್ತು. ಇದೀಗ ರಾಜ್ಯ ಸರಕಾರದ ಮೂಲಕ ಮೈಸೂರು ದಸರಾದಲ್ಲಿ ಕಂಬಳ ನಡೆಸಲಾಗುತ್ತಿದೆ. ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಪೂರ್ಣ ಸಹಕಾರ ನೀಡಿದ್ದು, ಅವರಿಗೆ ಅಭಿನಂದನೆ ತಿಳಿಸಲೇಬೇಕು ಎಂದರು.
ಪ್ರಾಣಿ ಹಿಂಸೆ ಇಲ್ಲದೆ ಕಂಬಳ ಕ್ರೀಡೆಯನ್ನು ಆಡಿಸಬೇಕು ಎನ್ನುವುದು ಶಾಸಕಾಂಗದಲ್ಲೇ ನಿರ್ಧರವಾಗಿದೆ. ಆದರೆ ಇದು ಕರಾವಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಎಲ್ಲರ ಸಹಕಾರದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ ನಡೆಸಲಾಗುತ್ತಿದೆ. ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೇ, ಸಹಕಾರ ನೀಡಬೇಕೆಂದು ವಿನಂತಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೂಪೇಶ್ ರೈ ಅಲಿಮಾರ್, ಕಂಬಳಕ್ಕೆ ಮೈಸೂರಿನ ರೈತ ಸಂಘವೂ ಬೆಂಬಲ ನೀಡುತ್ತದೆ. ಆದರೆ ಮೈಸೂರು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದುದರಿಂದ ದಸರಾ ಆಚರಣೆ ಮಾಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ನಂತರದ ಬೆಳವಣಿಗೆಯಲ್ಲಿ ದಸರಾ ಹಾಗೂ ನಾಡಹಬ್ಬದಲ್ಲಿ ಕಂಬಳ ಕೂಟ ನಡೆಸಲು ನಿರ್ಧಾರವಾಗಿದೆ. ಮೈಸೂರು ಭಾಗದಲ್ಲಿ ಬಂಡಿ ಓಟ ನಡೆಸಲಾಗುತ್ತದೆ. ಒಂದು ವೇಳೆ ಕರಾವಳಿ ಭಾಗದಲ್ಲಿ ಬಂಡಿ ಓಟ ನಡೆಸಿದರೆ, ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದ ಅವರು, ಮೈಸೂರು ದಸರಾದ ಕಂಬಳದಲ್ಲಿ ಸುಮಾರು 120ರಷ್ಟು ಜೋಡಿ ಕೋಣಗಳು ಭಾಗವಹಿಸಲಿವೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಶಾಹುಲ್ ಹಮೀದ್, ವಲೇರಿಯನ್ ವೇಗಸ್, ಕೋಡಿಂಬಾಡಿ ಘಟಕದ ಯೊಗೀಶ್ ಸಾಮಾನಿ ಕೋಡಿಂಬಾಡಿ, ಮೋನಪ್ಪ ಗೌಡ ಉಪಸ್ಥಿತರಿದ್ದರು.


































