ಪುತ್ತೂರು: ಕರ್ನಾಟಕದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್-2026ರಲ್ಲಿ ಮಂಗಳೂರಿನ ಲಿಟಲ್ ವಯಲಿನ್ ಚಾಂಪ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಅಶ್ಮಿತ್ ಎ.ಜೆ. ಪ್ರಥಮ ಸ್ಥಾನ ಪಡೆದು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಪುಣಚ ಗ್ರಾಮದ ಮೂಡಂಬೈಲ್ ನಿವಾಸಿಗಳಾದ ರೇವತಿ ಹಾಗೂ ಜಯರಾಮ್ ದಂಪತಿಯ ಪುತ್ರ ಅಶ್ಮಿತ್, ಕಾರ್ಯಕ್ರಮದ ಪ್ರತಿ ಸುತ್ತಿನಲ್ಲೂ ಉತ್ತಮ ಗಾಯನದ ಮೂಲಕ ತೀರ್ಪುಗಾರರಾದ ಖ್ಯಾತ ಗಾಯಕ ವಿಜಯ್ ಪ್ರಕಾಶ್, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ತಮ್ಮ ಸಂಗೀತ ಪ್ರತಿಭೆಯ ಮೂಲಕ ‘ಸ್ವರ ಪುತ್ರ’ ಎಂಬ ಬಿರುದನ್ನೂ ಪಡೆದುಕೊಂಡಿದ್ದಾರೆ.
ಅತೀ ಕಿರಿಯ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಅಶ್ಮಿತ್, ಮಂಗಳೂರಿನ ಸೈಂಟ್ ಗೊಂಝಗ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಧ್ಯಾ ಸತ್ಯನಾರಾಯಣ ಭಟ್ ಅವರ ಬಳಿ ಸಂಗೀತ ತರಬೇತಿ ಪಡೆಯುತ್ತಿರುವ ಅವರು, ವಿದ್ವಾನ್ ವೇಣುಗೋಪಾಲ್ ಶಾನ್‌ಭೋಗ್ ಅವರಿಂದ ವಯಲಿನ್ ತರಬೇತಿಯನ್ನೂ ಪಡೆಯುತ್ತಿದ್ದಾರೆ.
ಸರಿಗಮಪ ಲಿಟಲ್ ಚಾಂಪ್ಸ್ ವೇದಿಕೆಯಲ್ಲಿ ತಮ್ಮ ಗಾಯನ ಹಾಗೂ ವಯಲಿನ್ ಪ್ರತಿಭೆಯಿಂದ ಗಮನ ಸೆಳೆದ ಅಶ್ಮಿತ್ ಇದೀಗ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಕರಾವಳಿಗೆ ಹೆಮ್ಮೆ ತಂದಿದ್ದಾರೆ.

































