ಪುತ್ತೂರು: ಘಟನಾ ಸ್ಥಳದಲ್ಲಿ ಲಾಠಿಚಾರ್ಜ್ ನಡೆಸಿದ ಪೊಲೀಸ್ ಕಾನ್ಸ್‌ಸ್ಟೇಬಲ್ ಒಬ್ಬರು ಮದ್ಯಪಾನ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಆಲ್ಕೋಮೀಟರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಮದ್ಯಪಾನ ಮಾಡದಿರುವುದು ದೃಢಪಟ್ಟಿದೆ ಎಂದು ಪುತ್ತೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ದೂರುದಾರರು ಹಾಗೂ ಪ್ರತಿದೂರುದಾರರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಬಳಿ ಕಾನ್ಸ್‌ಸ್ಟೇಬಲ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅಲ್ಲಿದ್ದ ಕೆಲವರು ಪೊಲೀಸ್ ಸಿಬ್ಬಂದಿ ಮದ್ಯಪಾನ ಮಾಡಿರುವುದಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಆಲ್ಕೋಮೀಟರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಮದ್ಯಪಾನ ಮಾಡಿಲ್ಲ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಕರ್ತವ್ಯನಿರತ ಪೊಲೀಸರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ದೂರುದಾರರ ಆಕ್ಷೇಪಣೆ ಪರಿಶೀಲನೆ
ಪ್ರಕರಣದ ಮೊದಲ ದೂರುದಾರರಾದ Crime No. 97/2026ರ ದೂರುದಾರರು, ದೂರಿನಲ್ಲಿ ಆರೋಪಿಗಳ ಪೈಕಿ ಪ್ರಮುಖ ಆರೋಪಿಯಾಗಿರುವ ಅಂಜನಾ ಪೈ ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಇದೇ ವೇಳೆ Crime No. 98/2026ರ ದೂರುದಾರರು, ತಮ್ಮ ದೂರಿನಲ್ಲಿ ಉಲ್ಲೇಖಿಸಿರುವಂತೆ ತಮ್ಮ ಪುತ್ರ ಸುದರ್ಶನ್ ಪೈ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ ನೌಷಾದ್ ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಈ ಎರಡೂ ಆಕ್ಷೇಪಣೆಗಳನ್ನು ತನಿಖಾಧಿಕಾರಿಗಳು ಪರಿಶೀಲಿಸಲಿದ್ದು, ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ಯಾವುದೇ ಹೆಚ್ಚಿನ ಮಾಹಿತಿ ಅಥವಾ ದಾಖಲೆಗಳು ಸಾರ್ವಜನಿಕರ ಬಳಿ ಇದ್ದಲ್ಲಿ, ಅವುಗಳನ್ನು ನೇರವಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸಲ್ಲಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
































