ಪುತ್ತೂರು: ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಅಕಾಲಿಕವಾಗಿ ಮೃತಪಟ್ಟ ಲೈನ್‌ಮ್ಯಾನ್ ರವಿ ಗೌಡ ಕೆಮ್ಮಾಯಿ ಅವರ ಕುಟುಂಬಕ್ಕೆ ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದರು.
ಪುತ್ತೂರಿನ ಕೆದಿಲ ಪಾಟ್ರಕೋಡಿ, ಮಿತ್ತೂರು ಗಡಿಯಾರ, ಕೆಮ್ಮಾಯಿ ನಿವಾಸಿ ರವಿ ಗೌಡ ಅವರು ಕರ್ತವ್ಯದ ವೇಳೆ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದರು. ಕರ್ತವ್ಯದ ಕರೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ, ಯಾವುದೇ ಸಮಯದಲ್ಲೂ ಸ್ಪಂದಿಸಿ ಕೆಲಸ ಮಾಡುತ್ತಿದ್ದ ಅವರು ನಿಷ್ಠಾವಂತ ಹಾಗೂ ಕರ್ತವ್ಯಪರ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ನಿಧನ ಗ್ರಾಮಸ್ಥರು ಹಾಗೂ ಸಮುದಾಯದವರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು ರವಿ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ದುಃಖದ ಸಂದರ್ಭದಲ್ಲಿ ಕುಟುಂಬದೊಂದಿಗೆ ಸಮುದಾಯವು ಇರಲಿದೆ ಎಂಬ ಭರವಸೆಯನ್ನು ನೀಡಿದರು.
ಇದೇ ವೇಳೆ ಸಮುದಾಯದ ವತಿಯಿಂದ ಕುಟುಂಬಕ್ಕೆ ಚೆಕ್ ಮೂಲಕ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.
ರವಿ ಗೌಡ ಅವರ ನಿಧನ ಕುಟುಂಬಕ್ಕೆ ಮಾತ್ರವಲ್ಲದೆ ಗ್ರಾಮ ಹಾಗೂ ಸಮುದಾಯಕ್ಕೂ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಮುದಾಯದ ಪ್ರಮುಖರು ಪ್ರಾರ್ಥಿಸಿದರು.























