ಈಶ್ವರಮಂಗಲ: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆ ಮತ್ತು ಸಹ ಸಂಸ್ಥೆಗಳ ಸಹಯೋಗದಲ್ಲಿ ಡಿಸೆಂಬರ್ 20ರಂದು ನಡೆಯಲಿರುವ ವಾರ್ಷಿಕ ಸಮಾವೇಶ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಯಶಸ್ಸಿಗಾಗಿ ಈಶ್ವರಮಂಗಲ ವಲಯದ ಪೂರ್ವಭಾವಿ ಸಭೆ ಶನಿವಾರ ನಡೆಯಿತು.
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಮಾಜಿ ಅಧ್ಯಕ್ಷ ಈಶ್ವರಮಂಗಲದ ಬೊಮ್ಮೆಟ್ಟಿ ನಾಗಪ್ಪ ಗೌಡ ಅವರ ನಿವಾಸದಲ್ಲಿ ಬೆಳಿಗ್ಗೆ 9 ಗಂಟೆಗೆ ವಲಯ ಉಸ್ತುವಾರಿ ಜಗನ್ನಾಥ್ ಪಟ್ಟೆ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಜರುಗಿತು. ಸಮುದಾಯದ ಒಗ್ಗಟ್ಟು, ಸಂಘಟನೆಯ ಬಲವರ್ಧನೆ ಹಾಗೂ ಸರ್ವರ ಸಹಭಾಗಿತ್ವದೊಂದಿಗೆ ವಾರ್ಷಿಕ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಯಿತು.
ಡಿಸೆಂಬರ್ 20ರ ಕಾರ್ಯಕ್ರಮದ ಪೂರ್ವಸಿದ್ಧತೆ, ಆರು ಗ್ರಾಮ ಸಮಿತಿಗಳ ಸಂಘಟನಾತ್ಮಕ ಸಹಭಾಗಿತ್ವ, ಮನೆಮನೆಗೆ ಆಮಂತ್ರಣ ತಲುಪಿಸುವ ಕಾರ್ಯ ಹಾಗೂ ಕಾರ್ಯಕ್ರಮದ ಪ್ರಚಾರ ಮತ್ತು ಯಶಸ್ವಿ ಅನುಷ್ಠಾನದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಪಾಣತ್ತಿಲ, ಪ್ರಚಾರ ಸಮಿತಿ ಸಂಚಾಲಕ ಯತೀಶ್ ದೇವ, ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ವಲಯ ಉಸ್ತುವಾರಿ ಜಗನ್ನಾಥ್ ಪಟ್ಟೆ ಸೇರಿದಂತೆ ಈಶ್ವರಮಂಗಲ ವಲಯದ ವಿವಿಧ ಗ್ರಾಮ ಸಮಿತಿಗಳ ಅಧ್ಯಕ್ಷರು, ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು, ಊರಗೌಡರು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು.





















