ಪುತ್ತೂರು: ಕತ್ತೆಗೆ ವಯಸ್ಸು ಮಾತ್ರ ಆಗುವುದಲ್ಲ; ಅನುಭವವೂ ಆಗುತ್ತದೆ. ವಯಸ್ಸು, ಅನುಭವ ಮಾತ್ರ ರಾಜಕೀಯದಲ್ಲಿ ಸಾಕಾಗುವುದಿಲ್ಲ. ಮನುಷ್ಯತ್ವದ ಗುಣ ಇರಬೇಕು ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಟಾಂಗ್ ನೀಡಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಹೇಳಿಕೆ ಹಿನ್ನೆಲೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರೀಶ್ ಪೂಂಜಾ ಅವರು ಹೊಟ್ಟೆಕಿಚ್ಚಿನಿಂದ ಮಾತನಾಡಿದ್ದಾರೆ. ಸಣ್ಣ ಅನುಭವದಿಂದ ಏನು ಮಾಡಬಹುದು ಎನ್ನುವುದನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಾಡಿ ತೋರಿಸಿದ್ದಾರೆ ಎಂದರು.
ಹರೀಶ್ ಪೂಂಜಾ ಅವರು ಪುತ್ತೂರು ಕ್ಷೇತ್ರದ ಬಗ್ಗೆ ಮಾತನಾಡುವ ಬದಲು, ತಮ್ಮದೇ ಕ್ಷೇತ್ರ ಬೆಳ್ತಂಗಡಿಯ ಬಗ್ಗೆ ಮೊದಲು ನೋಡಿಕೊಳ್ಳಬೇಕು. ಎರಡನೇ ಅವಧಿಗೆ ಶಾಸಕರಾದರೂ, ನೆರಿಯದ ಆದಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಆಗಿಲ್ಲ. ಅವರು ಅವ್ಯವಸ್ಥೆಯ ಬದುಕು ಕಟ್ಟಿಕೊಂಡಿದ್ದು, ಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. ಅವರ ಬದುಕು ಅತಂತ್ರವಾಗಿದೆ. ಯಾಕೆ ನೆರಿಯದ ಆದಿವಾಸಿಗಳು ಅತಂತ್ರ ದಿನಗಳನ್ನು ದೂಡುತ್ತಿದ್ದಾರೆ ಎಂದರೆ, ಬೆಳ್ತಂಗಡಿಯಲ್ಲಿ ಮನುಷ್ಯತ್ವ ಇರುವ ಶಾಸಕರು ಇಲ್ಲ ಎಂದು ವ್ಯಂಗ್ಯವಾಡಿದರು.
ರಸ್ತೆಯನ್ನು ಮೊದಲು ಸರಿಪಡಿಸಿ:
ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯನ್ನು ಸರಿಪಡಿಸಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಂದ ಆಗಿಲ್ಲ. 40 ಪರ್ಸೆಂಟೇಜ್ ಎಂಬ ಪದವನ್ನು ಹುಟ್ಟುಹಾಕಿದ ಹರೀಶ್ ಪೂಂಜಾ ಅವರಿಗೆ, ಕಮೀಷನ್ ಸರಿಯಾಗಿ ಸಿಗದೇ ಇರುವುದರಿಂದ ರಸ್ತೆ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಕಾಣುತ್ತದೆ. ಒಂದು ವೇಳೆ ಹರೀಶ್ ಪೂಂಜಾರಿಂದ ರಸ್ತೆ ಸರಿಪಡಿಸಲು ಆಗದೇ ಹೋದರೆ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ನೀಡಿ. ಅವರು ಸರಿಪಡಿಸುತ್ತಾರೆ ಎಂದರು.
ಗಾಜಿನ ಮನೆಯಲ್ಲಿದ್ದೀರಿ; ಮರೆಯದಿರಿ:
ಬೆಳ್ತಂಗಡಿ ಶಾಸಕರ ಜೊತೆಗೆ ಇರುವ ಬ್ರಾಹ್ಮಣ, ಬಿಲ್ಲವ, ಗೌಡ, ಬಂಟ್ಸ್ ಮೊದಲಾದ ಜಾತಿಗಳಿಗೆ ಏನು ಕೊಟ್ಟಿದ್ದಾರೆ? ಜಾಗವಾದರೂ ನೀಡಿದ್ದಾರೆಯೇ? ದೇವಸ್ಥಾನದ ಬ್ರಹ್ಮಕಲಶಕ್ಕೆ ಜಾಗ ನೀಡಿದ ಮುಸಲ್ಮಾನರನ್ನೇ, ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಬರಬಾರದು ಎಂದು ಹೇಳಿದವರು ಅವರು. ಆದರೆ ಪುತ್ತೂರಿನಲ್ಲಿ ಎಲ್ಲಾ ಜಾತಿ, ಸಮುದಾಯದ ಜನರು ಒಗ್ಗಟ್ಟಾಗಿ ಜೀವನ ನಡೆಸುತ್ತಿದ್ದಾರೆ. ಪೂಂಜಾ ಅವರೇ, ನೀವು ಗಾಜಿನ ಮನೆಯಲ್ಲಿದ್ದೀರಿ. ಇನ್ನೊಬ್ಬರ ಮನೆಗೆ ಕಲ್ಲು ಹೊಡೆಯುವ ಪ್ರಯತ್ನ ಬೇಡ ಎಂದು ಕಿವಿಮಾತು ಹೇಳಿದರು.
ಚರ್ಚೆಗೆ ಸಿದ್ಧ:
ಈ ಎಲ್ಲಾ ವಿಚಾರಗಳ ಬಗ್ಗೆ ನಾವು ಚರ್ಚೆಗೆ ಸಿದ್ಧ. ನಿಮ್ಮದೇ ಕಚೇರಿಗೆ ಬೇಕಾದರೂ ನಾವು ಬರುತ್ತೇವೆ. ದಿನ, ಸಮಯ ಗೊತ್ತುಪಡಿಸಿ ಎಂದು ಕರೆ ನೀಡಿದರು.
ಹೊಡೆದು ಓಡುವ ನೀತಿ:
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರ ಮಾತನಾಡಿ, ಹರೀಶ್ ಪೂಂಜಾ ಅವರು ಜವಾಬ್ದಾರಿಯುತ ಶಾಸಕನೂ ಅಲ್ಲ, ನಾಯಕನೂ ಅಲ್ಲ. ಬೆಳೆ ವಿಮೆಯ ಟರ್ಮ್ ಶೀಟ್ ಬದಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಆರೋಪ ಹೊರಿಸಿದರು. ಇದಕ್ಕೆ ನಾವು ದಾಖಲೆ ಸಹಿತ ಉತ್ತರ ನೀಡಿದ್ದೇವೆ. ಟರ್ಮ್ ಶೀಟ್ ಬದಲಾಯಿಸಿದ್ದು, ನಿಮ್ಮದೇ ಸರಕಾರದ ಬಸವರಾಜ್ ಬೊಮ್ಮಯಿ ಹಾಗೂ ರಾಜ್ಯಪಾಲರು ಎನ್ನುವುದನ್ನು ಮನವರಿಕೆ ಮಾಡಿದೆವು. ಟರ್ಮ್ ಶೀಟ್ ಬದಲಾವಣೆ ಎಂದಿದ್ದಕ್ಕೆ ಪುತ್ತೂರು ಕಾಂಗ್ರೆಸಿಗರು ಕೌಂಟರ್ ನೀಡಿಗರು. ಅದು ಪೂಂಜಾರಿಗೆ ಬಿಸಿ ಮುಟ್ಟಿದೆ. ಅದಕ್ಕಾಗಿ ಪುತ್ತೂರಿನ ಬಗ್ಗೆ ಹೇಳಿಕೆ ನೀಡ್ತಾ ಇದ್ದಾರೆ ಎಂದರು.
ಪೂಂಜಾ ಅವರದ್ದು ಹೊಡೆದು ಓಡುವ ನೀತಿ. ಅಲ್ಲದೇ ಇದ್ದರೆ, ಅವರು ಇದಕ್ಕೆ ಉತ್ತರ ನೀಡಬೇಕಿತ್ತು. ಆದರೆ ಅವರು ಬಾಯಿ ಮುಚ್ಚಿ ಕುಳಿತಿದ್ದಾರೆ. ಬಿಜೆಪಿಯ ಜಿಲ್ಲಾ ನಾಯಕರೇ ಮಾತನಾಡುತ್ತಿಲ್ಲ, ಬೆಳ್ತಂಗಡಿ ಶಾಸಕರು ಏಕೆ ಮಾತನಾಡುತ್ತಿದ್ದಾರೆ? ಅಲ್ಲಿ ಕುಳಿತುಕೊಂಡು ಪುತ್ತೂರಿನ ಬಗ್ಗೆ ಮಾತನಾಡುವುದು ಯಾಕೆ? ಇಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಅವರಿಗೇನೂ ಗೊತ್ತು. ಅದೂ ಅಲ್ಲದೇ, ಕತ್ತೆಯನ್ನೇಕೆ ಎಳೆದು ತರಬೇಕಿತ್ತು. ಮನುಷ್ಯರಿಗೂ ವಯಸ್ಸಾಗ್ತಾ ಇದೆ. ಅಂದರೆ ಪೂಂಜಾರದ್ದು, ಕಂಡೆಮ್ನ್ ಮಾಡುವ ಉದ್ದೇಶ ಎಂದು ಟೀಕೆ ಮಾಡಿದರು.
ಪ್ರಮುಖರಾದ ರಾಮ ಮೇನಾಲ್, ಸಿರಿಲ್ ರೋಡ್ರಿಗಸ್, ಎಸ್ಟಿ ಘಟಕ ಅಧ್ಯಕ್ಷ ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.





















