ರಾಜಕೀಯ

ಬಿಜೆಪಿಯಿಂದ ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ: ರವೀಂದ್ರ ನೆಕ್ಕಿಲು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಶೋಕ್ ಕುಮಾರ್ ರೈ ಅವರ ಕೆಲಸಗಳ ಬಗ್ಗೆ ಬೂಡಿಯಾರ್ ರಾಧಾಕೃಷ್ಣ ರೈ ಅವರು ಟೀಕೆ ಮಾಡಿದ್ದಾರೆ. ಅವರು ಕಾಂಗ್ರೆಸ್ ಎಂದು ಟೀಕೆ ಮಾಡುತ್ತಿಲ್ಲ. ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ. ಅಂದರೆ ಬಿಜೆಪಿಯಲ್ಲಿ ಅಶೋಕ್ ಕುಮಾರ್ ರೈ ಅವರಂತಹ ನಾಯಕರೇ ಇಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರ ರವೀಂದ್ರ ನೆಕ್ಕಿಲು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂಡಿಯಾರ್ ರಾಧಾಕೃಷ್ಣ ರೈ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶಿಲಾನ್ಯಾಸಕ್ಕೆ ಹೋಗುವಾಗ ಬ್ಯಾನರ್ ಹಾಕ್ತಾರೆ ಅಂತ ಹೇಳ್ತಾರೆ. ಹಾಗೆಂದು ಶಾಸಕರು ಸುಖಾಸುಮ್ಮನೆ ಹೋಗ್ತಾರೆಯೇ? ಸುಳ್ಳು ಬ್ಯಾನರ್ ಹಾಕಿದ್ದರೆ ದಾಖಲೆ ಸಹಿತ ಬರಲಿ. ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಇದನ್ನು ಮತದಾರರು ಗಮನಿಸುತ್ತಾ ಇದ್ದಾರೆ.

ಜಾಮೀನು ನೀಡುವುದು ಶಾಸಕರಾ?

ಕುರಿಯ ಗ್ರಾಮದಲ್ಲಿ ಓರ್ವ ವ್ಯಕ್ತಿ ಮಹಿಳೆಯರನ್ನು‌ ಚುಡಾಯಿಸಿದ ವ್ಯಕ್ತಿಗೆ ಜಾಮೀನು ನೀಡಿರುವುದು ನ್ಯಾಯಾಲಯ. ಶಾಸಕರು ಜಾಮೀನು ನೀಡುವುದಲ್ಲ. ಮುಸಲ್ಮಾನ ವ್ಯಕ್ತಿ ಎಂದು ಧರ್ಮದ ಬಣ್ಣ ಹಚ್ಚುತ್ತಿದ್ದಾರೆ. ಕೋಮು ಬಣ್ಣ ಹಚ್ಚುವ ಕಾರ್ಯವನ್ನು ಬಿಜೆಪಿ ನಿಲ್ಲಿಸಬೇಕು.

ಭೂನ್ಯಾಯ ಮಂಡಳಿಯ ಸಭೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ನಿರಂಜನ್ ರೈ ಮಠಂತಬೆಟ್ಟು ಅವರು ಇದೇ ಮಂಡಳಿಯ ಸಭೆ ನಡೆಯುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟಿದ್ದರು. ಅಂದರೆ ಸಭೆ ನಡೆಯುತ್ತಾ ಇದೆ. ಇದು ಅವರ ಕಣ್ಣಿಗೆ ಕಾಣುತ್ತಿಲ್ಲವೇ?

ಜಿಪಂ, ತಾಪಂ ಚುನಾವಣೆ ನಡೆಸದೇ ವರ್ಷ 6 ಆಯಿತು. ಹಿಂದಿನ ಬಿಜೆಪಿ ಸರಕಾರ ಇದ್ದಾಗ 3 ವರ್ಷ ಚುನಾವಣೆ ನಡೆಸಿಯೇ ಇಲ್ಲ. ಆಗ ನೀವೇನೂ‌ ಕಡ್ಲೆಕಾಯಿ ತಿನ್ತಾ ಇದ್ದೀರಾ? ಇದೀಗ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಇದರ ಮೈಲೇಜನ್ನು ತಾವು ಪಡೆದುಕೊಳ್ಳಲು ಇದೀಗ ಆರೋಪಗಳನ್ನು ಮಾಡ್ತಾ ಇದ್ದಾರೆ ಎಂದರು.

ಅಕ್ರಮ ಅಕ್ರಮ ಫೈಲ್ ಗಳು ಇಷ್ಟು ಆಗಿರುವುದು ಕರ್ನಾಟಕದಲ್ಲೇ ಇಲ್ಲ. ಸರಿಯಾದ ರೀತಿಯಲ್ಲಿ ವಿತರಣೆ ಆಗಬೇಕು ಎಂಬ ನಿಟ್ಟಿನಲ್ಲಿ ಹಕ್ಕುಪತ್ರ ನೀಡಿಲ್ಲ. ಸರ್ವೆ ಇಲಾಖೆ ಇದನ್ನು ನಿರ್ವಹಿಸುತ್ತಾ ಇದೆ ಎಂದರು. ಕೆಡಿಪಿ ಸಭೆ ಆಗಲೇ ಇಲ್ಲ ಎಂದು ಹೇಳುವಂತಿಲ್ಲ; ಆಗಿದೆ. ಸಮಯದ ವ್ಯತ್ಯಾಸದಿಂದ ಇದೀಗ ನಡೀತಾ ಇಲ್ಲ ಎಂದರು.

ದೇವಸ್ಥಾನದ ವಿಚಾರದಲ್ಲಿ ಬಿಜೆಪಿಯವರು ಕುಮ್ಮಕ್ಕು ನೀಡಿ, ತಮ್ಮ ಬೇಳೆ ಬೇಯಿಸಿಕೊಳ್ತಾ ಇದ್ದಾರೆ. ಈ ಮಣ್ಣಿನಲ್ಲಿ ಇದೆಲ್ಲಾ ನಡೆಯುವುದಿಲ್ಲ ಎಂದಿದ್ದಾರೆ. ಯಾವುದೆಲ್ಲಾ ನಡೀತಾ ಇದೆ ಎನ್ನುವುದನ್ನು ಮಹಾಲಿಂಗೇಶ್ವರ ದೇವರು ನಿರ್ಧರಿಸುತ್ತಾರೆ. ಇದೇ ರೀತಿಯ ಅಭಿವೃದ್ಧಿ ಕಾರ್ಯ ನಡೆಸ್ತಾ ಹೋದರೆ, ತಮಗೆ ಕಷ್ಟ ಎಂಬ ನೆಲೆಯಲ್ಲಿ ಈ ರೀತಿಯ ಆರೋಪಗಳನ್ನು ಮಾಡ್ತಾ ಇದ್ದಾರೆ ಎಂದರು.

ಪ್ರಶ್ನೆಗೆ ಉತ್ತರಿಸುತ್ತಾ, ಮೆಸ್ಕಾಂ ಭ್ರಷ್ಟಾಚಾರದ ಬಗ್ಗೆ ಆರೋಪ ಇದೆ. ಭ್ರಷ್ಟಾಚಾರ ನಡೆದಿದ್ದರೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಸರಕಾರದ ಮೇಲೆ ನಮಗೆ ನಂಬಿಕೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪುಡಾ ಸದಸ್ಯ ನಿಹಾಲ್ ಪಿ. ಶೆಟ್ಟಿ, ಆರ್ಯಾಪು ವಲಯ ಅಧ್ಯಕ್ಷ ಗಿರೀಶ್ ರೈ ಕೈಕಾರ, ಎಸ್ಸಿ ಘಟಕ ತಾಲೂಕು ಪುತ್ತೂರು ತಾಲೂಕು ಅಧ್ಯಕ್ಷ ಬಾಬು ಮರಿಕೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣ್ ಸೀಕ್ವೇರಾ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts