ಬೆಂಗಳೂರು: ದಾವಣಗೆರೆಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೊನೆಗೂ ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಭಾವೋದ್ವೇಗದ ಸಂದರ್ಭದಲ್ಲಿ ಮಾತಿನ ತಪ್ಪಾಗಿದ್ದು, ಇದರಿಂದ ಕಾಂಗ್ರೆಸ್ ನಾಯಕರಿಗೆ ನೋವಾಗಿದ್ದರೆ ವಿಷಾದವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಕ್ಷಮೆಯಾಚನೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ಟಿಂಗ್ ಆಪರೇಷನ್ ವಿಚಾರವನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುವ ಮೂಲಕ ರಾಜಕೀಯ ಸಮರವನ್ನು ಮುಂದುವರಿಸಿದ್ದಾರೆ.
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯೇಂದ್ರ, ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದ್ದರು. ಮೀಸಲಾತಿ ಗೊಂದಲ, ಕೆಪಿಎಸ್ಸಿ ಪರೀಕ್ಷಾ ಅಕ್ರಮಗಳ ಆರೋಪ, ಉದ್ಯೋಗ ನೇಮಕಾತಿಯಲ್ಲಿನ ವಿಳಂಬ ಹಾಗೂ ಹಾಲಿನ ದರ ಏರಿಕೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ “ಈ ನನ್ ಮಕ್ಕಳು ಕಾಂಗ್ರೆಸ್ನವರು…” ಎಂಬ ಆಕ್ಷೇಪಾರ್ಹ ಪದ ಬಳಸಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ವಿಜಯೇಂದ್ರ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಭಾಷೆ ಬಳಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.
ಕ್ಷಮೆಯಾಚನೆಗೆ ಕಾಂಗ್ರೆಸ್ನಿಂದ ಮೂರು ದಿನಗಳ ಗಡುವು
ವಿಜಯೇಂದ್ರ ಅವರ ಹೇಳಿಕೆಯನ್ನು ಖಂಡಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ಮೂರು ದಿನಗಳೊಳಗೆ ಯಾವುದೇ ಷರತ್ತಿಲ್ಲದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ನಿವಾಸದ ಸುತ್ತಮುತ್ತ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದ್ದರು. ವಿಜಯೇಂದ್ರ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನವೂ ನಡೆದಿತ್ತು. ಈ ಬೆಳವಣಿಗೆಗಳ ನಡುವೆ ವಿಜಯೇಂದ್ರ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.
‘ಭಾವೋದ್ವೇಗದಲ್ಲಿ ಆ ಪದ ಬಳಕೆಯಾಗಿದೆ’
ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಕೆಪಿಎಸ್ಸಿ ವಿಚಾರ ಹಾಗೂ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ಆ ಪದ ಬಳಕೆಯಾಗಿದೆಯೇ ಹೊರತು, ಯಾರನ್ನೂ ವೈಯಕ್ತಿಕವಾಗಿ ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಮಾತಿನಿಂದ ಕಾಂಗ್ರೆಸ್ ನಾಯಕರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ ಅವರು, ಹೇಳಿಕೆಗೆ ವಿಷಾದ ವ್ಯಕ್ತಪಡಿಸುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದರು.
ಕ್ಷಮೆಯಾಚನೆ ಬೆನ್ನಲ್ಲೇ ಸ್ಟಿಂಗ್ ಆಪರೇಷನ್ ಪ್ರಸ್ತಾಪ
ಒಂದು ಕಡೆ ಕ್ಷಮೆಯಾಚಿಸಿದ ವಿಜಯೇಂದ್ರ, ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದರು. ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪುತ್ರ ಯತೀಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ ಎಂದ ಅವರು, ಸ್ಟಿಂಗ್ ಕಾರ್ಯಾಚರಣೆಯ ಹಿಂದಿರುವ ಉದ್ದೇಶ ಹಾಗೂ ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸುವ ಬದಲು ಸರ್ಕಾರ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರದೊಳಗಿನ ಆಂತರಿಕ ಬೆಳವಣಿಗೆಗಳು ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಟ್ಟದ ಬೆಳವಣಿಗೆಗಳನ್ನೂ ಉಲ್ಲೇಖಿಸಿದ ವಿಜಯೇಂದ್ರ, ಸ್ಟಿಂಗ್ ವಿವಾದದ ಮೂಲಕ ಕಾಂಗ್ರೆಸ್ಸಿಗರು ತಮ್ಮ ಸಮಸ್ಯೆಗಳನ್ನು ತಾವೇ ಸೃಷ್ಟಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಕೋಲಾರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ವಿಜಯೇಂದ್ರ, ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿರುವುದನ್ನು ಕಾಂಗ್ರೆಸ್ ಸಹಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ದೇಶದ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿರುವುದನ್ನು ಆ ಪಕ್ಷದ ನಾಯಕರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ರೈತವಿರೋಧಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಕೋಲಾರದಲ್ಲಿ ಬಿಜೆಪಿ ವತಿಯಿಂದ ಬೃಹತ್ ಜನಜಾಗೃತಿ ಅಭಿಯಾನ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟಿನಲ್ಲಿ, ಆಕ್ಷೇಪಾರ್ಹ ಹೇಳಿಕೆಯಿಂದ ಆರಂಭವಾದ ವಿವಾದಕ್ಕೆ ವಿಜಯೇಂದ್ರ ಕ್ಷಮೆಯಾಚನೆಯ ಮೂಲಕ ವಿರಾಮ ನೀಡಲು ಪ್ರಯತ್ನಿಸಿದರೂ, ಸ್ಟಿಂಗ್ ಆಪರೇಷನ್ ಹಾಗೂ ರಾಜ್ಯ ಸರ್ಕಾರದ ವಿರುದ್ಧದ ಆರೋಪಗಳ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆ ಸಿದ್ಧವಾಗಿದೆ.
























