ಅಪರಾಧ

ಶಿರಾಡಿಯಲ್ಲಿ ನಕ್ಸಲರು ಪ್ರಕರಣ: ಮಂಡಗಾರು ಲತಾ ಉಪ್ಪಿನಂಗಡಿ ಪೊಲೀಸರ ಕಸ್ಟಡಿಗೆ!!

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: 2018ರಲ್ಲಿ ಶಿರಾಡಿ ಗ್ರಾಮದ ಮಿತ್ತಮಜಲು ಪ್ರದೇಶದಲ್ಲಿ ಸಶಸ್ತ್ರಧಾರಿ ನಕ್ಸಲರ ತಂಡವೊಂದು ಮನೆಗೆ ಭೇಟಿ ನೀಡಿ ಆಹಾರ ಧಾನ್ಯಗಳನ್ನು ಕೊಂಡೊಯ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರಕಾರಕ್ಕೆ ಶರಣಾಗತಳಾಗಿರುವ ಶೃಂಗೇರಿ ತಾಲೂಕಿನ ಮಂಡಗಾರು ಲತಾ (40) ಅವರನ್ನು ಉಪ್ಪಿನಂಗಡಿ ಪೊಲೀಸರು ಕಸ್ಟಡಿಗೆ ಪಡೆದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

2018ರ ಜನವರಿ ತಿಂಗಳಲ್ಲಿ ಶಿರಾಡಿ ಗ್ರಾಮದ ಮಿತ್ತಮಜಲು ಪ್ರದೇಶಕ್ಕೆ ಕಾಡಿನ ಮೂಲಕ ಆಗಮಿಸಿದ್ದ ಸಶಸ್ತ್ರಧಾರಿ ನಕ್ಸಲರ ತಂಡವೊಂದು ಸ್ಥಳೀಯ ನಿವಾಸಿಯೊಬ್ಬರ ಮನೆಯ ಬಾಗಿಲು ತಟ್ಟಿತ್ತು. ಬಳಿಕ ಮನೆಯಲ್ಲಿದ್ದ ಆಹಾರ ಪದಾರ್ಥಗಳನ್ನು ಸೇವಿಸಿದ್ದ ತಂಡವು, ಕಾಡಿನಲ್ಲಿ ಬಳಕೆ ಮಾಡುವ ಉದ್ದೇಶದಿಂದ ಮನೆಯಲ್ಲಿದ್ದ ಆಹಾರ ಧಾನ್ಯಗಳನ್ನು ಕೊಂಡೊಯ್ದಿತ್ತು. ಈ ಘಟನೆಯಿಂದ ಸ್ಥಳೀಯರಲ್ಲಿ ಭೀತಿ ಉಂಟಾಗಿತ್ತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಕ್ಸಲ್ ನಿಗ್ರಹ ಪಡೆ ಸ್ಥಳಕ್ಕೆ ಧಾವಿಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಹಲವು ನಕ್ಸಲರು ಸರಕಾರದ ಮುಂದೆ ಶರಣಾಗಿದ್ದರು. ಶರಣಾದವರಲ್ಲಿ ಶೃಂಗೇರಿ ತಾಲೂಕಿನ ಮಂಡಗಾರು ಲತಾ ಕೂಡ ಒಬ್ಬರಾಗಿದ್ದಾರೆ.

ಶಿರಾಡಿ ಗ್ರಾಮದ ಮಿತ್ತಮಜಲು ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಲತಾ ಅವರ ವಿಚಾರಣೆ ಅಗತ್ಯವಾಗಿದ್ದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಬಳಿಕ 2018ರ ಘಟನೆಯ ಸ್ಥಳಕ್ಕೆ ಕರೆದೊಯ್ದು ಅಂದಿನ ಘಟನೆಗೆ ಸಂಬಂಧಿಸಿದಂತೆ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 122