ಖಾಸಗಿ ಹೋಟೆಲ್ನ ಈಜುಕೊಳದಲ್ಲಿ ಉಂಟಾದ ಎಲೆಕ್ಟ್ರಿಕ್ ಶಾಕ್ ಪರಿಣಾಮ ಇಬ್ಬರು ವಿದೇಶಿಗರು ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಲೋವಾಕಿಯಾ ಮೂಲದ ಓರಿಯಾಟ್ (45) ಮತ್ತು ಜರ್ಮನ್ ಮೂಲದ ಅಲೆಕ್ಸಾಂಡರ್ ಮ್ಯಾಕ್ಸಿಲನ್ (59) ಮೃತ ದುರ್ದೈವಿಗಳಾಗಿದ್ದಾರೆ.
ಈ ಸಂಬಂಧ ಮೃತ ಅಲೆಕ್ಸಾಂಡರ್ ಪತ್ನಿ ದೂರು ನೀಡಿದ್ದು, ಸ್ಥಳಕ್ಕೆ ಹಲಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.
ಕಾನ್ರಾಡ್ ಹೋಟೆಲ್ನ 3ನೇ ಮಹಡಿಯಲ್ಲಿರುವ ಸ್ವಿಮ್ಮಿಂಗ್ ಪೂಲ್ನಲ್ಲಿ ಘಟನೆ ನಡೆದಿದೆ. ಸ್ಲೋವೋಕಿಯಾ ಮತ್ತು ಜರ್ಮನ್ ಮೂಲದ ಇಬ್ಬರು ಕಳೆದ ಕೆಲ ದಿನಗಳಿಂದ ಹೋಟೆಲ್ನಲ್ಲಿ ತಂಗಿದ್ದರು. ಘಟನೆ ವೇಳೆ ಇಬ್ಬರನ್ನು ರಕ್ಷಿಸಲು ಅಮೆರಿಕ ಮೂಲದ ವ್ಯಕ್ತಿ ಮತ್ತು ಪೂಲ್ ಅಟೆಂಡರ್ ಯತ್ನಿಸಿದ್ದು, ಅವರಿಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಹೋಟೆಲ್ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
























