ಪುತ್ತೂರು: ಮೂರು ದಶಕಗಳ ನಿರಂತರ ಕಲಾಸಾಧನೆ, ನೃತ್ಯ ಪರಂಪರೆಯ ಪೋಷಣೆ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯ ಸಾರ್ಥಕ ಪಯಣಕ್ಕೆ ಸಾಕ್ಷಿಯಾಗಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ತನ್ನ 30ನೇ ವರ್ಷದ ಸಂಭ್ರಮದಲ್ಲಿದೆ. ಈ ಸುಸಂದರ್ಭದಲ್ಲಿ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಸಂಸ್ಥೆಯು, ಇದೀಗ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತೆರೆದ ಸಭಾಂಗಣದಲ್ಲಿ `ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎಂಬ ವಿಶಿಷ್ಟ ಕಲೋತ್ಸವವನ್ನು ಆಯೋಜಿಸಿದೆ.
ಕಲೆಯ ನಾದ, ನೃತ್ಯದ ಲಯ ಹಾಗೂ ಸಂಸ್ಕöÈತಿಯ ಸೊಗಡನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಲಿರುವ ಈ ಎರಡು ದಿನಗಳ ಕಾರ್ಯಕ್ರಮವು ಶಾಸ್ತ್ರೀಯ ನೃತ್ಯಗಳ ವೈವಿಧ್ಯ, ಸಂಗೀತದ ಮಧುರಿಮೆ, ಸೃಜನಶೀಲ ಪ್ರಯೋಗ ಹಾಗೂ ಯುವ ಪ್ರತಿಭೆಗಳ ಕಲಾಪ್ರತಿಭೆಗೆ ಸಾಕ್ಷಿಯಾಗಲಿದೆ.
ಅಕಾಡೆಮಿಯ ನೃತ್ಯ ನಿರ್ದೇಶಕ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೂರದರ್ಶನದ ಏಕೈಕ ಎ-ಟಾಪ್ ಗ್ರೇಡ್ ಕಲಾವಿದ ವಿದ್ವಾನ್ ಬಿ. ದೀಪಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ದಶಕಗಳಿಂದ ಸಂಸ್ಥೆಯು ನೃತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಹತ್ತು ತಿಂಗಳ ಹಿಂದೆ `ನೃತ್ಯೋತ್ಕೃಮಣ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಮೂರು ದಶಕಗಳ ಹಿಂದಿನ ತಮ್ಮ ರಂಗಪ್ರವೇಶದ ಕ್ಷಣಗಳನ್ನು ಮರುಸೃಷ್ಟಿಸಿ ಪ್ರಸ್ತುತಪಡಿಸಿದ್ದ ದೀಪಕ್ ಕುಮಾರ್ ಅವರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಲೆಯ ಮೇಲಿನ ನಿಷ್ಠೆ, ನಿರಂತರ ಅಭ್ಯಾಸ ಹಾಗೂ ಸೃಜನಶೀಲ ಪ್ರಯೋಗಗಳ ಮೂಲಕ ಬೆಳೆದುಬಂದಿರುವ ಸಂಸ್ಥೆಯ ಮೂರು ದಶಕಗಳ ಸಾಧನೆಯನ್ನು ಸ್ಮರಿಸುವ ಈ ಕಲೋತ್ಸವವು ಹಿರಿಯ ಕಲಾವಿದರ ಅನುಭವ, ಕಿರಿಯರ ಉತ್ಸಾಹ ಹಾಗೂ ಹೊಸ ತಲೆಮಾರಿನ ಕಲ್ಪನಾಶಕ್ತಿಯನ್ನು ಬೆಸೆಯುವ ವೇದಿಕೆಯಾಗಲಿದೆ.
ಅ. 31ರಂದು ಕಲೋತ್ಸವಕ್ಕೆ ಚಾಲನೆ
ಪತ್ರಿಕಾಗೋಷ್ಟಿಯಲ್ಲಿ ವಿದ್ವಾನ್ ಬಿ ದೀಪಕ್ ಕುಮಾರ್ ಅವರು ಮಾತನಾಡಿ ಅ. 31ರಂದು ಬೆಳಿಗ್ಗೆ 9.30ಕ್ಕೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ಆಡಳಿತ ಮಂಡಳಿ ಪ್ರಧಾನ ನಿರ್ದೇಶಕ ಮುಳಿಯ ಕೇಶವಪ್ರಸಾದ್ ಅವರು ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಿರಿಯ ವಿದ್ಯಾರ್ಥಿಗಳ ಉದ್ಘಾಟನಾ ನೃತ್ಯದೊಂದಿಗೆ ಕಲೋತ್ಸವ ಆರಂಭವಾಗಲಿದ್ದು, ಬಳಿಕ ಸಂಸ್ಥೆಯ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಂದ ನೃತ್ಯಪ್ರಸ್ತುತಿಗಳು ನಡೆಯಲಿವೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶುಭನುಡಿಗಳನ್ನಾಡಲಿದ್ದಾರೆ. ಮೋಹಿನಿಯಾಟ್ಟಂ, ಕೂಚಿಪುಡಿ ಹಾಗೂ ಕಥಕ್ ಸೇರಿದಂತೆ ವಿವಿಧ ಶಾಸ್ತ್ರೀಯ ನೃತ್ಯಪ್ರಕಾರಗಳು ಪ್ರೇಕ್ಷಕರನ್ನು ಕಲಾಲೋಕಕ್ಕೆ ಕರೆದೊಯ್ಯಲಿವೆ ಎಂದವರು ಹೇಳಿದರು.
`ಹಳೆ ಹೆಜ್ಜೆ-ಹೊಸ ಭಾವ’ದಲ್ಲಿ ಹಿರಿಯ ವಿದ್ಯಾರ್ಥಿಗಳ ನೃತ್ಯ
ಮಧ್ಯಾಹ್ನದ ಊಟದ ಬಳಿಕ ಹಿರಿಯ ವಿದ್ಯಾರ್ಥಿಗಳಿಂದ `ಹಳೆ ಹೆಜ್ಜೆ-ಹೊಸ ಭಾವ’ ಎಂಬ ವಿಶೇಷ ನೃತ್ಯಪ್ರಸ್ತುತಿ ನಡೆಯಲಿದೆ. ಹಳೆಯ ಅನುಭವಗಳಿಗೆ ಹೊಸ ಭಾವಾಭಿವ್ಯಕ್ತಿಯನ್ನು ಬೆಸೆಯುವ ಈ ಕಾರ್ಯಕ್ರಮದ ಬಳಿಕ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮ `ರಸ-ಸರಸ’ ನಡೆಯಲಿದೆ. ಕೃಷ್ಣವೇಣಿಪ್ರಸಾದ್ ಮುಳಿಯ ಅವರು ಇದನ್ನು ನಿರ್ವಹಿಸಲಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಶುಭನುಡಿಗಳನ್ನಾಡಲಿದ್ದು, ನಂತರ ಸಂಸ್ಥೆಯ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಂದ ನೃತ್ಯಪ್ರಸ್ತುತಿಗಳು ನಡೆಯಲಿವೆ ಎಂದು ದೀಪಕ್ ಕುಮಾರ್ ಹೇಳಿದರು.
ಆಳ್ವಾಸ್ನಿಂದ ನವದುರ್ಗೆ, ಅಷ್ಟಲಕ್ಷ್ಮೀ ನೃತ್ಯ ವೈಭವ
ಸಂಜೆ 6 ಗಂಟೆಯಿಂದ ಸಂಸ್ಥೆಯ ಶಾಖೆಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಲಾವಿದರಿಂದ ವಿಶೇಷ ನೃತ್ಯಪ್ರದರ್ಶನ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಈ ಸಂಜೆಯ ಪ್ರಮುಖ ಆಕರ್ಷಣೆಗಳಾಗಿ ನವದುರ್ಗೆ ಮತ್ತು ಅಷ್ಟಲಕ್ಷ್ಮೀ ನೃತ್ಯರೂಪಕಗಳು ಮೂಡಿಬರಲಿವೆ. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಿಂದ `ಲೀಲಾಮಾನುಷ ವಿಗ್ರಹ’ ಎಂಬ ವಿಶೇಷ ನೃತ್ಯಪ್ರಸ್ತುತಿಯೂ ನಡೆಯಲಿದೆ. ಬೆಂಗಳೂರಿನ ಪ್ರವೀಣ್ ರಾವ್ ಅವರು ಸಂಗೀತ ಸಂಯೋಜನೆಯ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ ಎಂದು ದೀಪಕ್ ಕುಮಾರ್ ಹೇಳಿದರು.
ನ. 1ರಂದು ಯಕ್ಷನೃತ್ಯ, ಮಣಿಪುರಿ ಹಾಗೂ ಅಂತಾಕ್ಷರಿಯ ಸೊಬಗು
ನವೆಂಬರ್ 1ರಂದು ಬೆಳಿಗ್ಗೆ 9.30ಕ್ಕೆ ದ್ವಾರಕಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಅವರು ದೀಪಪ್ರಜ್ವಲನೆ ಮಾಡಲಿದ್ದಾರೆ. ಬಳಿಕ ಯಕ್ಷನೃತ್ಯ ಹಾಗೂ ಮಣಿಪುರಿ ಸೇರಿದಂತೆ ವಿವಿಧ ನೃತ್ಯಪ್ರಕಾರಗಳ ಪ್ರಸ್ತುತಿಗಳು ನಡೆಯಲಿವೆ. ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಶುಭನುಡಿಗಳನ್ನಾಡಲಿದ್ದಾರೆ. ನಂತರ ಸಂಸ್ಥೆಯ ಶಾಖೆಗಳ ನೃತ್ಯಪ್ರಸ್ತುತಿಗಳು ಹಾಗೂ ಸಂಗೀತ, ನೃತ್ಯ ಅಂತಾಕ್ಷರಿ ಕಾರ್ಯಕ್ರಮ ನಡೆಯಲಿದೆ. ಕಲೆಯ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಮನರಂಜನೆಯೊಂದಿಗೆ ಬೆಸೆಯುವ ಈ ಕಾರ್ಯಕ್ರಮವು ಕಲಾಸಕ್ತರಿಗೆ ಹೊಸ ಅನುಭವ ನೀಡಲಿದೆ.
`ಆಶು ನರ್ತನ’ದಲ್ಲಿ ಯುವ ಪ್ರತಿಭೆಗಳ ಸೃಜನಶೀಲ ಸವಾಲು
ಮಧ್ಯಾಹ್ನ 2 ಗಂಟೆಯ ಬಳಿಕ ಕರಾವಳಿಯ ಆಯ್ದ ಯುವ ಪ್ರತಿಭೆಗಳು ಸ್ಥಳದಲ್ಲೇ ನೃತ್ಯ ಸಂಯೋಜನೆ ಮಾಡಿ ಪ್ರದರ್ಶಿಸುವ ವಿಶಿಷ್ಟ ಕಾರ್ಯಕ್ರಮ `ಆಶು ನರ್ತನ’ ನಡೆಯಲಿದೆ. ಧರಿತ್ರಿ ಭಿಡೆ, ಡಾ. ಮಹಿಮಾ ಪಣಿಕ್ಕರ್, ತ್ರಿಶಾ ಶೆಟ್ಟಿ, ಗಾರ್ಗಿ ದೇವಿ ಹಾಗೂ ಅಂಗಿಕಾ ಶೆಟ್ಟಿ ಅವರು ತಮ್ಮ ನೃತ್ಯಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ. ತಕ್ಷಣದ ಸೃಜನಶೀಲತೆ, ಸಂಗೀತದ ಲಯಗ್ರಹಿಕೆ ಹಾಗೂ ನೃತ್ಯಾಭಿವ್ಯಕ್ತಿಯ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಈ ಕಾರ್ಯಕ್ರಮವು ಯುವ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ವಿಭಿನ್ನವಾಗಿ ಪ್ರದರ್ಶಿಸಲು ಅವಕಾಶ ಕಲ್ಪಿಸಲಿದೆ. ಇದರ ಬಳಿಕ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಮಹಾಲಕ್ಷ್ಮೀ ಕೆಮ್ಮಿಂಜೆ ಅವರು ಶುಭನುಡಿಗಳನ್ನಾಡಲಿದ್ದಾರೆ ಎಂದು ದೀಪಕ್ ಕುಮಾರ್ ಹೇಳಿದರು.
`ಹಾಸ್ಯದ ಹೊನಲು’ ನೃತ್ಯಪ್ರಸ್ತುತಿ
ನೃತ್ಯದ ಗಂಭೀರ ಅಭ್ಯಾಸದ ನಡುವೆ ಹಾಸ್ಯವನ್ನೂ ಕಲಾತ್ಮಕವಾಗಿ ಬೆಸೆಯುವ ಉದ್ದೇಶದಿಂದ `ಹಾಸ್ಯದ ಹೊನಲು’ ಎಂಬ ವಿಶೇಷ ನೃತ್ಯಪ್ರಸ್ತುತಿ ಆಯೋಜಿಸಲಾಗಿದೆ. ಉಡುಪಿಯ ಸೃಷ್ಟಿ ನೃತ್ಯ ಕುಟೀರದ ನಿರ್ದೇಶಕಿ ಡಾ. ಮಂಜರಿ ಚಂದ್ರ ಪುಷ್ಪರಾಜ್ ಅವರು ಹಾಸ್ಯಪ್ರಜ್ಞೆ ಮತ್ತು ನೃತ್ಯಾಭಿವ್ಯಕ್ತಿಯ ಸಮ್ಮಿಲನದೊಂದಿಗೆ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ದೀಪಕ್ ಕುಮಾರ್ ಹೇಳಿದರು.
ಸಂಗೀತ ಸಂಭ್ರಮ, ನೃತ್ಯ ಸಂಭ್ರಮ:
ನವೆಂಬರ್ 1ರಂದು ಸಂಜೆ 5 ಗಂಟೆಯಿಂದ ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ `ಸಂಗೀತ ಸಂಭ್ರಮ’ ನಡೆಯಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಬಳಿಕ ಸಂಸ್ಥೆಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಿಂದ `ನೃತ್ಯ ಸಂಭ್ರಮ’ ಎಂಬ ವಿಶೇಷ ಪ್ರಸ್ತುತಿ ನಡೆಯಲಿದೆ ಎಂದು ದೀಪಕ್ ಕುಮಾರ್ ಹೇಳಿದರಲ್ಲದೆ ಸಂಗೀತ, ಶಾಸ್ತ್ರೀಯ ನೃತ್ಯ, ಯಕ್ಷನೃತ್ಯ, ರಸಪ್ರಶ್ನೆ, ಅಂತಾಕ್ಷರಿ, ಹಾಸ್ಯ ಹಾಗೂ ಆಶು ನರ್ತನದಂತಹ ವೈವಿಧ್ಯಮಯ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಕಲಾಭಿಮಾನಿಗಳಿಗೆ ರಸದೌತಣ ನೀಡಲಿವೆ. ಕಳೆದ ಮೂರು ದಶಕಗಳ ಕಲಾಸಾಧನೆಯ ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ ಮುಂದಿನ ಪೀಳಿಗೆಗೆ ಕಲಾಪರಂಪರೆಯ ಸ್ಫೂರ್ತಿಯನ್ನು ಹಂಚುವ ಆಶಯ ಹೊಂದಿರುವ `ಮೂಕಾಂಬಿಕಾ ಮೂವತ್ತರ ಮಾರ್ದನಿ’, ಪುತ್ತೂರಿನ ಸಾಂಸ್ಕೃತಿಕ ವಲಯದಲ್ಲಿ ಸ್ಮರಣೀಯ ಕಲೋತ್ಸವವಾಗಿ ಮೂಡಿಬರುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ಮತ್ತು ಸಂಗೀತ ಶಿಕ್ಷಕಿ ವಿದುಷಿ ಪ್ರೀತಿಕಲಾ ಉಪಸ್ಥಿತರಿದ್ದರು.
























