ಪುತ್ತೂರು: ಡಾ. ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ ಸಾಂಸ್ಕೃತಿಕ ಉತ್ಸವ 72ನೇ ದಸರಾ ನಾಡಹಬ್ಬ ಅ. 11ರಂದು ಸಂಜೆ 6.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ಎಂ.ಟಿ. ಜಯರಾಮ್ ಭಟ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ಎಂ.ಟಿ. ಜಯರಾಮ್ ಭಟ್ ಅಧ್ಯಕ್ಷತೆ ವಹಿಸಲಿದ್ದು, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ.ವಿ. ಮುಖ್ಯಅತಿಥಿಯಾಗಿರುವರು. ಬಳಿಕ ಅಂದರೆ 7ರಿಂದ 8.30ರವರೆಗೆ ಭರತನಾಟ್ಯ ಕಾರ್ಯಕ್ರಮ ರಸಧಾರೆ ನಡೆಯಲಿದೆ ಎಂದರು.
ಅ. 12ರಂದು ಸಂಜೆ 6ಕ್ಕೆ ಎನ್. ಸುಬ್ರಹ್ಮಣ್ಯಂ ಕೊಳತ್ತಾಯ ಸಂಸ್ಮರಣೆ, ನಂತರ ವೀಣಾ ವಾದನ ಜರುಗಲಿದೆ. ಅ. 13ರಂದು ಕರುನಾಡಿನ ದಸರಾ ಮತ್ತು ಇತಿಹಾಸ ವಿಷಯದಲ್ಲಿ ಉಪನ್ಯಾಸ ಹಾಗೂ ಶಾಸ್ತ್ರೀಯ ಸಂಗೀತ, ಅ. 14ರಂದು ಉಳಿತಾಯ ಬದುಕಿನ ತಳಪಾಯ ವಿಷಯದಲ್ಲಿ ಉಪನ್ಯಾಸ ಹಾಗೂ ನೃತ್ಯಧಾರ ಭರತನಾಟ್ಯ, ಅ. 15ರಂದು ಗಿಡಮೂಲಿಕೆ ಮಹತ್ವದ ವಿಷಯದಲ್ಲಿ ಉಪನ್ಯಾಸ ಹಾಗೂ ವಯಲಿನ್ ವಾದನ, ಕರ್ನಾಟಕ ಶಾಸ್ತ್ರೀಯ ಸಂಗೀತ, ಅ. 16ರಂದು ಅಂತರಿಕ್ಷದತ್ತ ಭಾರತದ ಜಿಗಿತ ಉಪನ್ಯಾಸ ಬಳಿಕ ಹಿಂದುಸ್ತಾನಿ ಸಂಗೀತ ಮತ್ತು ಭಜನ್ ಭಕ್ತಿಗೀತೆಗಳು, ಭಕ್ತಿಭಾವ ಗೀತೆಗಳು ನಡೆಯಲಿದೆ.
ಅ. 17ರಂದು ಶ್ರೀ ಚಕ್ರ ಉಪಾಸನೆ ವಿಷಯದಲ್ಲಿ ಉಪನ್ಯಾಸ, ಸಮರ ಸೌಗಂಧಿಕಾ ಯಕ್ಷಗಾನ ತಾಳಮದ್ದಳೆ, ಅ. 18ರಂದು ಜೀವನಕ್ಕೆ ಯೋಗ ವಿಷಯದಲ್ಲಿ ಉಪನ್ಯಾಸ, ಭರತನಾಟ್ಯ, ಅ. 19ರಂದು ಮಹಿಳೆ ಮತ್ತು ಸಂಸ್ಕೃತಿ ರಕ್ಷಣೆ ವಿಷಯದಲ್ಲಿ ಉಪನ್ಯಾಸ, ಕರ್ನಾಟಕ ಶಾಸ್ತ್ರೀಯ ಸಂಗೀತ ಜರುಗಲಿದೆ.
ಅ. 20ರಂದು ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ ಪ್ರಾಚಾರ್ಯರಾದ ವಿ.ಬಿ. ಅರ್ತಿಕಜೆ ಹಾಗೂ ಪ್ರೊ. ಹರಿನಾರಾಯಣ ಮಾಡಾವು ಅವರನ್ನು ಸನ್ಮಾನಿಸಲಾಗುವುದು. ಬಳಿಕ ಮೇಧಿನಿ ನಿರ್ಮಾಣ ಮಹಿಷ ವಧೆ ಯಕ್ಷಗಾನ ಬಯಲಾಟ ಪ್ರಸ್ತುತಿಗೊಳ್ಳಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿ ಸಮಿತಿ ಗೌರವಾಧ್ಯಕ್ಷ ಎನ್.ಕೆ. ಜಗನ್ನಿವಾಸ ರಾವ್, ಕಾರ್ಯದರ್ಶಿ ಡಾ. ವಿಜಯ ಸರಸ್ವತಿ ಬಿ., ಉಪ ಕಾರ್ಯದರ್ಶಿ ಈಶ್ವರಚಂದ್ರ ಡಿ.ಎನ್., ಉಪಾಧ್ಯಕ್ಷ ಮಣಿಲ ಮಹಾದೇವ ಶಾಸ್ತ್ರಿ, ಜತೆ ಕಾರ್ಯದರ್ಶಿ ಶಂಕರಿ ಶರ್ಮ ಎಂ. ಉಪಸ್ಥಿತರಿದ್ದರು.
























