ರಾಜ್ಯ ವಾರ್ತೆ

ಡಿಸಿ ನಿವಾಸದಲ್ಲಿ ಡಿಜೆ – ರೈತ‌ನ ವ್ಯಂಗ್ಯ: ಡಿಸಿ ಜೊತೆಗಿನ ಸಂಭಾಷಣೆ ವೈರಲ್!!

ಈ ಸುದ್ದಿಯನ್ನು ಶೇರ್ ಮಾಡಿ

ರೈತರು ಬರಗಾಲದಿಂದ ಕಂಗಾಲಾಗಿದ್ದಾರೆ. ಬೆಳೆ ವಿಮೆ ಇನ್ನೂ ಬಂದಿಲ್ಲ. ಅಂತಹದ್ದರಲ್ಲಿ ಜಿಲ್ಲಾಧಿಕಾರಿ ನಿವಾಸದಲ್ಲಿ ಡಿಜೆ ಹಾಕಿ ಭಾರೀ ಸಂಭ್ರಮ.

ಇದು ನಡೆದಿರುವುದು ಗದಗ ಜಿಲ್ಲಾಧಿಕಾರಿ ನಿವಾಸದಲ್ಲಿ. ಜಿಲ್ಲಾಧಿಕಾರಿ ಸಿ.ಎನ್.‌ ಶ್ರೀಧರ್‌ ಅವರ ಬೀಳ್ಕೊಡುಗೆ ಹಿನ್ನೆಲೆ.

ರೈತರು ಬರಗಾಲದಿಂದ ಕಂಗಾಲಾಗಿದ್ದರೆ, ಅಧಿಕಾರಿಗಳು ಮೋಜು ಮಸ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ರೈತರ ಸಂಕಷ್ಟವನ್ನು ಕೇಳುವವರೇ ಇಲ್ಲ ಎನ್ನುವುದು ರೈತ ಶಿರಹಟ್ಟಿ ತಾಲೂಕಿನ ಒಡವಿ ಗ್ರಾಮದ ರಾಜೀವ ಬೊಮ್ಮನಕಟ್ಟಿಯ ಅಳಲು.

ಡಿಜೆ ಬುಕ್‌ ಮಾಡಿದ್ದೇನೆ:

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಕರೆ ಮಾಡಿ, ಡಿಜೆ ಬುಕ್‌ ಮಾಡಿದ್ದೇನೆ. ಇವತ್ತು ತರಿಸುತ್ತಿದ್ದೇನೆ. ಎಲ್ಲಿ ತರಲಿ? ಎನ್ನುವ ಪ್ರಶ್ನೆಯನ್ನು ಫೋನ್‌ ಕರೆಯಲ್ಲಿ ಜಿಲ್ಲಾಧಿಕಾರಿ ಮುಂದಿಟ್ಟಿದ್ದಾರೆ ರೈತ

ಮಾತುಕತೆ ಆರಂಭದಲ್ಲೇ ರೈತ, ‘ಸಾಹೇಬ್ರೇ, ಡಿಜೆ ಬುಕ್ ಮಾಡಿದ್ದೇನೆ. ಇವತ್ತು ತರಿಸುತ್ತಿದ್ದೇನೆ. ಎಲ್ಲಿ ತರಿಸಲಿ?’ ಎಂದು ಕೇಳುತ್ತಾರೆ. ಇದಕ್ಕೆ ಜಿಲ್ಲಾಧಿಕಾರಿ, ‘ಏನು, ಡೀಸೆಲ್ ಬೇಕಾ? ಪೆಟ್ರೋಲ್ ಬಂಕ್‌ಗೆ ಹೋಗು’ ಎಂದು ಪ್ರತಿಕ್ರಿಯಿಸುತ್ತಾರೆ. ಆಗ ರೈತ, ‘ಡೀಸೆಲ್ ಅಲ್ಲ ಸಾಹೇಬ್ರೇ, ಡಿಜೆ. ಕುಣಿಯುವವರು ಇರ್ತಾರಲ್ಲ, ಅದೇ ಡಿಜೆ’ ಎಂದು ಸ್ಪಷ್ಟಪಡಿಸುತ್ತಾರೆ.

ಮುಂದುವರಿದು, ‘ಗದಗ ಜಿಲ್ಲೆ ಸಮೃದ್ಧವಾಗಿದೆ. ರೈತರಿಗೆ ನ್ಯಾಯ ಸಿಕ್ಕಿಲ್ಲ, ಕುಡಿಯಲು ನೀರಿಲ್ಲ, ದನಗಳಿಗೆ ಮೇವು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಡಿಜೆ ಹಚ್ಚಿ ಕಾರ್ಯಕ್ರಮ ಮಾಡಿದ್ದೀರಿ. ಅದಕ್ಕೇ ನಿಮಗೂ ಡಿಜೆ ತರಿಸುತ್ತಿದ್ದೇನೆ’ ಎಂದು ರೈತ ವ್ಯಂಗ್ಯವಾಗಿ ಮಾತನಾಡುತ್ತಾರೆ. ನವೆಂಬರ್ 30ರಂದು ಜಿಲ್ಲಾಧಿಕಾರಿಯಾಗಿ ನೀವು ಇರುವುದರಿಂದ ಡಿಜೆ ಎಲ್ಲಿ, ಎಷ್ಟೊತ್ತಿಗೆ ತರಬೇಕು ಎಂದು ಪ್ರಶ್ನಿಸುತ್ತಾರೆ. ಆದರೆ ಜಿಲ್ಲಾಧಿಕಾರಿ, ‘ನನಗೆ ಏನೂ ಬೇಕಾಗಿಲ್ಲ. ನೀನು ಮಾಡಬೇಕಾದ್ದನ್ನು ಮಾಡು’ ಎಂದು ಹೇಳುತ್ತಾರೆ.

ಈ ವೇಳೆ ರೈತ, ‘ನಾವು ಕುಡಿಯಲು ನೀರಿಲ್ಲದೆ, ದನಗಳಿಗೆ ಮೇವು ಇಲ್ಲದೆ ಸಂಕಷ್ಟದಲ್ಲಿದ್ದೇವೆ. ಊಟ ಮಾಡುವುದನ್ನೇ ನಿಲ್ಲಿಸಿದ್ದೇವೆ’ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಇದಕ್ಕೆ ಜಿಲ್ಲಾಧಿಕಾರಿ, ‘ನಿನಗೆ ಏನಾದರೂ ಸಮಸ್ಯೆ ಇದ್ದರೆ ಬೆಳಗ್ಗೆ 9.30ಕ್ಕೆ ಕಚೇರಿಗೆ ಬಾ’ ಎಂದು ಪ್ರತಿಕ್ರಿಯಿಸುತ್ತಾರೆ. ಆದರೆ ರೈತ, ‘ಒಂದು ವರ್ಷದಿಂದ ಮಳೆ ಆಗಿಲ್ಲ. ಬೆಳೆ ವಿಮೆ ಕ್ಲೇಮ್ ಮಾಡಿದ್ದೀರಾ? ನಮಗೆ ವಿಮೆ ಕೊಟ್ಟಿದ್ದೀರಾ?’ ಎಂದು ಪ್ರಶ್ನಿಸುತ್ತಾರೆ.

ಇದಕ್ಕೆ ಜಿಲ್ಲಾಧಿಕಾರಿ, ‘ಮುಂದಿನ ಸೋಮವಾರ ನಿಮ್ಮ ಖಾತೆಗಳಿಗೆ ಹಣ ಬರುತ್ತದೆ’ ಎಂದು ಉತ್ತರಿಸುತ್ತಾರೆ. ಹಣ ಯಾವ ದಿನ ಜಮೆಯಾಗುತ್ತದೆ ಎಂಬುದನ್ನು ಕೇಳಿದ ರೈತನಿಗೆ, ‘ಸೋಮವಾರ ಹಾಕುತ್ತೇವೆ ಎಂದು ಹೇಳಿದರೆ ಸೋಮವಾರವೇ ಹಾಕುತ್ತೇವೆ’ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಮಾತುಕತೆಯ ಕೊನೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ.

ಒಟ್ಟಿನಲ್ಲಿ, ಜಿಲ್ಲಾಧಿಕಾರಿಯ ಬೀಳ್ಕೊಡುಗೆ ಕಾರ್ಯಕ್ರಮದ ಬಗ್ಗೆ ರೈತ ವ್ಯಂಗ್ಯವಾಡಿರುವುದು ಮಾತ್ರವಲ್ಲದೆ, ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಮತ್ತು ಬೆಳೆ ವಿಮೆ ಪರಿಹಾರದ ವಿಳಂಬದ ಬಗ್ಗೆಯೂ ಪ್ರಶ್ನಿಸಿದ್ದಾರೆ. ಈ ಫೋನ್ ಸಂಭಾಷಣೆ ಇದೀಗ ಗದಗ ಜಿಲ್ಲೆಯಲ್ಲಿ ವೈರಲ್‌ ಆಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts