ಕರಾವಳಿ

ತುಳುನಾಡಿನ ಮಣ್ಣಿನ ಕಟ್ಟಡ ನಿರ್ಮಾಣ ಪರಂಪರೆ – ಪ್ರದರ್ಶನ ಉದ್ಘಾಟನೆ!

ಈ ಸುದ್ದಿಯನ್ನು ಶೇರ್ ಮಾಡಿ

ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆಯಾದ ಇಂಟಾಕ್‌ನ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ನಗರದ ಕೊಡಿಯಾಲ್‌ ಗುತ್ತು ಕಲಾಕೇಂದ್ರದಲ್ಲಿ ‘ತುಳುನಾಡಿನ ಮಣ್ಣಿನ ಕಟ್ಟಡ ನಿರ್ಮಾಣ ಪರಂಪರೆಗಳು’ ಕುರಿತ ಪ್ರದರ್ಶನದ ಉದ್ಘಾಟನೆಯೊಂದಿಗೆ ಗುರುವಾರ ಆರಂಭಗೊಂಡಿದೆ.

ಸ್ಥಳೀಯ ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ತಂತ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಜ್ಞಾನ ಪರಂಪರೆಯನ್ನು ದಾಖಲಿಸುವ ಉದ್ದೇಶದಿಂದ ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಸ್ ಬಸು ಮತ್ತು ಸದಸ್ಯೆ, ವಾಸ್ತುಶಿಲ್ಪಿ ಶರ್ವಾಣಿ ಭಟ್ ಕೈಗೊಂಡಿರುವ ದಾಖಲಾತಿ ಯೋಜನೆಯ ಅಂಗವಾಗಿ ಈ ಪ್ರದರ್ಶನ ನಡೆಯುತ್ತಿದೆ.

ಈ ಪ್ರದರ್ಶನವು ಜಗತ್ತಿನಾದ್ಯಂತ ಮಣ್ಣಿನ ಬ್ಲಾಕ್‌ಗಳನ್ನು ಬಳಸಿ ಕಟ್ಟಡ ನಿರ್ಮಿಸುವ ಪರಂಪರೆಯ ಇತಿಹಾಸವನ್ನು ಪರಿಚಯಿಸುವುದರೊಂದಿಗೆ ತುಳುನಾಡಿನ ಸಾಂಪ್ರದಾಯಿಕ ನಿರ್ಮಾಣ ತಂತ್ರಗಳು, ಅವುಗಳ ಹಿಂದಿರುವ ಜ್ಞಾನ ಮತ್ತು ಈ ಪ್ರದೇಶಕ್ಕೆ ಸಂಬಂಧಿಸಿದ ಉದಾಹರಣೆಗಳನ್ನು ಒಳಗೊಂಡಿದೆ.

ಇದರ ಬಗ್ಗೆ ವಿವರಿಸಿದ ಸುಭಾಸ್ ಬಸು ತುಳುನಾಡಿನ ಜನಜೀವನದಲ್ಲಿ ಮಣ್ಣು ಹಿಂದಿನಿಂದಲೂ ಅವಿಭಾಜ್ಯ ಅಂಗ ವಾಗಿತ್ತು. ಗೋಡೆಗಳ ನಿರ್ಮಾಣಕ್ಕೆ ಮಾತ್ರವಲ್ಲದೆ ಛಾವಣಿ, ನೆಲಹಾಸು ಹಾಗೂ ಗಾರೆ ಕೆಲಸಗಳಿಗೂ ಸ್ಥಳೀಯ ವಾಗಿ ಲಭ್ಯವಿರುವ ಲ್ಯಾಟರೈಟ್ ಮಣ್ಣನ್ನು ಬಳಸಲಾಗುತ್ತಿತ್ತು. ಹೀಗಾಗಿ ಅದು ಬಹುಪಯೋಗಿ ಹಾಗೂ ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಯಾಗಿತ್ತು. ಆಫ್ರಿಕಾ, ಏಷ್ಯಾ ಮತ್ತು ಯುರೋಪ್ ಸಹಿತ ಜಗತ್ತಿನ ವಿವಿಧ ಭಾಗಗಳಲ್ಲಿ ಮಣ್ಣಿನ ಕಟ್ಟಡ ನಿರ್ಮಾಣ ಪದ್ಧತಿ ಪ್ರಚಲಿತದಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ಇಂತಹ ಸಾಂಪ್ರದಾಯಿಕ ವಿಧಾನಗಳ ಬದಲಿಗೆ ಸುಟ್ಟ ಇಟ್ಟಿಗೆಗಳು, ಕಾಂಕ್ರಿಟ್ ಬ್ಲಾಕ್‌ಗಳು ಮತ್ತು ಆರ್‌ಸಿಸಿ ಸಹಿತ ಆಧುನಿಕ ನಿರ್ಮಾಣ ಸಾಮಗ್ರಿಗಳು ಬಳಕೆಗೆ ಬಂದಿವೆ ಎಂದು ಹೇಳಿದರು.

ಮಣ್ಣಿನೊಂದಿಗೆ ಬದುಕುವುದು ಈ ಪ್ರದೇಶದ ಸಂಸ್ಕೃತಿಯ ಭಾಗವಾಗಿತ್ತು. ಈ ಯೋಜನೆಯ ಮೂಲಕ ಕರಾವಳಿ ಕರ್ನಾಟಕದ ವಿಶಿಷ್ಟ ಕಟ್ಟಡ ನಿರ್ಮಾಣ ತಂತ್ರಗಳು ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ದಾಖಲಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅಧಿಕ ಮಳೆಯ ಸವಾಲುಗಳನ್ನು ಸ್ವೀಕರಿಸುತ್ತಾ ಸುಸ್ಥಿರ ಬದುಕಿಗಾಗಿ ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ಪದ್ಧತಿಗಳ ಮಹತ್ವವನ್ನು ಜನರು ಮತ್ತೆ ಅರಿತುಕೊಳ್ಳುವ ಸಂದರ್ಭ ಈ ದಾಖಲಾತಿ ಉಪಯುಕ್ತ ವಾಗಲಿದೆ ಎಂದು ಸುಭಾಸ್ ಬಸು ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು ಪಿಲಿಕುಳ ನಿಸರ್ಗಧಾಮ ಶೀಘ್ರವೇ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರ’: ಸಚಿವ ರಾಮಲಿಂಗಾರೆಡ್ಡಿ

ಪಿಲಿಕುಳ ನಿಸರ್ಗಧಾಮವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ…