ಮಂಗಳೂರು: ಕೃಷ್ಣಾಪುರ ಶ್ರೀ ಗಾಯತ್ರಿ ವಿಶ್ವಬ್ರಾಹ್ಮಣ ಸೇವಾ ಸಮಿತಿಯ ದಶಮಾನೋತ್ಸವ ಪ್ರಯುಕ್ತ ಕೃಷ್ಣಾಪುರ ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರ ನವಂಬರ್ 15ರಂದು ಕೃಷ್ಣಾಪುರದಲ್ಲಿರುವ ಸಂಘದ ಸಭಾಭವನದಲ್ಲಿ ನಡೆಯಿತು.
ಮಂಗಳೂರು ಎ.ಜೆ. ಇನ್ʼಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮಂಗಳೂರು ವೆನ್ ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್, ಮಂಗಳೂರು ವಿಶ್ವಕರ್ಮ ವೈದ್ಯರ ಸಂಘದ ಸಹಯೋಗದಲ್ಲಿ ಕೃಷ್ಣಾಪುರ ಶ್ರೀ ವಿಶ್ವಕರ್ಮ ಭಜನಾ ಮಂಡಳಿ, ಕೃಷ್ಣಾಪುರ ಸಭಾಭವನ ನಿರ್ಮಾಣ ಸಮಿತಿ, ಕೃಷ್ಣಾಪುರ ಶ್ರೀ ಗಾಯತ್ರಿ ಗಾನಸುಧಾ ಬಳಗದ ಆಶ್ರಯದಲ್ಲಿ ಕಾರ್ಯಕ್ರಮ ಜರಗಿತು.
ಶಿಬಿರ ಉದ್ಘಾಟಿಸಿದ ಮಂಗಳೂರು ಎ.ಜೆ. ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರೊಫೆಸರ್ ಡಾ. ಮನೋಹರ್ ಆಚಾರ್ ಶುಭಹಾರೈಸಿದರು.
ಕೃಷ್ಣಾಪುರ ಶ್ರೀ ಗಾಯತ್ರಿ ವಿಶ್ವಬ್ರಾಹ್ಮಣ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಆಶಾಲತಾ ಅಧ್ಯಕ್ಷತೆಯಲ್ಲಿ ನಡೆದ ಸಭೆ ಕಾರ್ಯಕ್ರಮದಲ್ಲಿ ಕೃಷ್ಣಾಪುರ ವಿಶ್ವನಾಥ ದೇವಸ್ಥಾನದ ಅಧ್ಯಕ್ಷರೂ, ಜ್ಯೋತಿಷ್ಯರೂ ಆದ ಕೆ.ಸಿ. ನಾಗೇಂದ್ರ ಭಾರಧ್ವಾಜ್, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಕೃಷ್ಣಾಪುರ ೪ನೇ ವಾರ್ಡ್ ನಿಕಟಪೂರ್ವ ಮನಪಾ ಸದಸ್ಯ ಲಕ್ಷ್ಮೀಶೇಖರ ದೇವಾಡಿಗ, ಕೃಷ್ಣಾಪುರ ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಶಿವರಾಮ ಆಚಾರ್ಯ, ಅಧ್ಯಕ್ಷ ವೆಂಕಟೇಶ್ ಹೊಸಬೆಟ್ಟು, ಮಂಗಳೂರು ಪ್ರಾದೇಶಿಕ ರಕ್ತಪೂರಕ ಕೇಂದ್ರ ಜಿಲ್ಲಾ ಆಸ್ಪತ್ರೆಯ ಸೀನಿಯರ್ ಸ್ಪೆಷಲಿಸ್ಟ್ ಡಾ. ಶರತ್ ಕುಮಾರ್, ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಅನಿತಾ ಪೃಥ್ವಿರಾಜ್ ಆಚಾರ್ಯ, ಕೃಷ್ಣಾಪುರ ಶ್ರೀ ಗಾಯತ್ರಿ ವಿಶ್ವಬ್ರಾಹ್ಮಣ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ಸುಜಾತ ಯೋಗೀಶ್ ಆಚಾರ್ಯ ಉಪಸ್ಥಿತರಿದ್ದು, ಶುಭಹಾರೈಸಿದರು.
ಬೆಳಿಗ್ಗೆ 9 ಗಂಟೆಯಿಂದ ನಡೆದ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಸಾಮಾನ್ಯ ತಪಾಸಣೆ, ರಕ್ತದೊತ್ತಡ ತಪಾಸಣೆ, ಮಧುಮೇಹ ತಪಾಸಣೆ, ಕಣ್ಣು ತಪಾಸಣೆ, ದಂತ ತಪಾಸಣೆ, ಎಲುಬು ಸಂಬಂಧ ಸಲಹೆ, ಮಹಿಳೆಯರ ಆರೋಗ್ಯ ಸಲಹೆ, ಉಚಿತ ವೈದ್ಯಕೀಯ ಸಲಹೆ ಮೊದಲಾದ ಸೇವೆಗಳನ್ನು ಶಿಬಿರದಲ್ಲಿ ನೀಡಲಾಯಿತು. ಇದರೊಂದಿಗೆ ರಕ್ತದಾನ ಶಿಬಿರವೂ ನಡೆಯಿತು.





















