ಮಂಗಳೂರು: ಕೈಗಾರಿಕಾ ಘಟಕಗಳಿಂದ ಹೊರಸೂಸಲಾಗುತ್ತಿದೆ ಎನ್ನಲಾದ ಹಾರು ಬೂದಿ, ಅತಿಯಾದ ಶಬ್ದ ಹಾಗೂ ದುರ್ನಾತದಿಂದ ಜೋಕಟ್ಟೆ ಮತ್ತು ಶಾಂತಿಗುಡ್ಡೆ ಪರಿಸರದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು. ಎಂಆರ್ಪಿಎಲ್–ಎಂಎಸ್ಇಝೆಡ್ ಮುಖ್ಯದ್ವಾರವನ್ನು ಮುಚ್ಚಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಜನರ ಆರೋಗ್ಯ ಮತ್ತು ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕೈಗಾರಿಕಾ ಘಟಕಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ವಾರದಿಂದ ಪ್ರದೇಶದಲ್ಲಿ ಅಸಹನೀಯ ಶಬ್ದ ಕೇಳಿಬರುತ್ತಿದ್ದು, ಸೋಮವಾರ ಸಂಜೆಯಿಂದ ಮನೆಗಳ ಮೇಲೆ ಹಾರು ಬೂದಿ ಬೀಳಲು ಆರಂಭವಾಗಿದೆ. ಇದರಿಂದ ಮನೆಗಳ ಅಂಗಳ, ಕಿಟಕಿ, ಬಾಗಿಲುಗಳು ಬೂದಿಯಿಂದ ಆವೃತವಾಗಿವೆ. ಸ್ಥಳೀಯ ಬಾವಿಗಳ ನೀರಿಗೂ ಬೂದಿ ಸೇರುತ್ತಿದ್ದು, ಕುಡಿಯುವ ನೀರು ಕಲುಷಿತಗೊಂಡಿದೆ ಎಂಬುದು ಗ್ರಾಮಸ್ಥರ ಆರೋಪ.
ಹಾರು ಬೂದಿಯಿಂದ ಕಣ್ಣು ಉರಿ, ಚರ್ಮದ ತುರಿಕೆ, ಉಸಿರಾಟದ ತೊಂದರೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಅನೇಕರಿಗೆ ಅಸ್ತಮಾ ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
ಈ ಸಮಸ್ಯೆಗಳ ಕುರಿತು ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಕಂಪೆನಿ ಅಧಿಕಾರಿಗಳು ಹಾರು ಬೂದಿಯಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ನಿತ್ಯವೂ ಮಾಲಿನ್ಯದ ಪರಿಣಾಮಗಳನ್ನು ಅನುಭವಿಸುತ್ತಿರುವ ಸ್ಥಳೀಯರ ನೋವು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.
ಕಂಪೆನಿ ಬೇಕಾದರೆ ಮೊದಲು ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಿ
ಕೈಗಾರಿಕಾ ಘಟಕಗಳ ಕಾರ್ಯಾಚರಣೆ ಮುಂದುವರಿಯಬೇಕಾದರೆ ಮೊದಲು ಸುತ್ತಮುತ್ತಲಿನ ಜನವಸತಿ ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಕಂಪೆನಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾಹಿತಿ ಹಕ್ಕಿನಡಿ ಪಡೆದಿರುವ ದಾಖಲೆಗಳ ಪ್ರಕಾರ ಕಂಪೆನಿಯ ಉತ್ಪಾದನೆಗೆ ಅಗತ್ಯವಿರುವ ಕಾನೂನುಬದ್ಧ ಅನುಮತಿಗಳ ಕುರಿತು ಹಲವು ಪ್ರಶ್ನೆಗಳಿವೆ. ಸೂಕ್ತ ದಾಖಲೆಗಳಿಲ್ಲದಿದ್ದರೆ ಉತ್ಪಾದನೆ ಹೇಗೆ ನಡೆಯುತ್ತಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಂಪೆನಿ ಮತ್ತು ಸರಕಾರ ನೀಡುತ್ತಿರುವ ಭರವಸೆಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮುಂದೆ ಕೇವಲ ಆಶ್ವಾಸನೆಗಳಿಗೆ ಮಣಿಯುವುದಿಲ್ಲ. ಜನರ ಜೀವಕ್ಕೆ ಅಪಾಯ ಉಂಟುಮಾಡುವ ಪರಿಸ್ಥಿತಿಯನ್ನು ಸಹಿಸಲು ಸಾಧ್ಯವಿಲ್ಲ. ಸ್ಥಳೀಯರಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮಹಿಳೆಯರು ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಆಗ್ರಹಿಸಿದರು.
ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ
ಮಂಗಳವಾರ ಬೆಳಗ್ಗೆ ಸುಮಾರು 8.30ಕ್ಕೆ ಆರಂಭಗೊಂಡ ಪ್ರತಿಭಟನೆ ಮಧ್ಯಾಹ್ನ 12 ಗಂಟೆಯವರೆಗೂ ಮುಂದುವರಿಯಿತು. ಪ್ರತಿಭಟನಾಕಾರರು ಮುಖ್ಯದ್ವಾರವನ್ನು ಬಂದ್ ಮಾಡಿ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರು ಉತ್ತರ ಉಪವಿಭಾಗದ ಪೊಲೀಸ್ ಉಪ ಆಯುಕ್ತ ಶ್ರೀಕಾಂತ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಇತರ ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
28 ಮಂದಿ ಪೊಲೀಸ್ ವಶಕ್ಕೆ; ಮಧ್ಯಾಹ್ನ ಬಿಡುಗಡೆ
ಎಂಆರ್ಪಿಎಲ್–ಎಂಎಸ್ಇಝೆಡ್ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಕೌನ್ಸಿಲರ್ಗಳಾದ ಸಿರಾಜ್ ಬಜ್ಪೆ, ರಿತೇಶ್ ಶೆಟ್ಟಿ, ಸುಪ್ರಿತಾ ಶೆಟ್ಟಿ ಹಾಗೂ ಸ್ಥಳೀಯರಾದ ರಫೀಕ್ ಶಾಂತಿಗುಡ್ಡೆ ಸೇರಿದಂತೆ ಒಟ್ಟು 28 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಬಜ್ಪೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಮಧ್ಯಾಹ್ನ ಸುಮಾರು 2 ಗಂಟೆಗೆ ಎಲ್ಲರನ್ನೂ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಜನರ ಜೀವಕ್ಕಿಂತ ಕಂಪೆನಿಯ ಕಾರ್ಯಾಚರಣೆ ಮುಖ್ಯವಲ್ಲ
“ಕಳೆದ ಒಂದು ವಾರದಿಂದ ಭಾರೀ ಶಬ್ದ ಕೇಳಿಬರುತ್ತಿದೆ. ಸೋಮವಾರ ಸಂಜೆಯಿಂದ ಹಾರು ಬೂದಿ ಬೀಳುತ್ತಿದ್ದು, ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ. ಮನೆಗಳ ಕಿಟಕಿ, ಬಾಗಿಲು ತೆರೆಯಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆತುಂಬಾ ಬೂದಿ ತುಂಬಿಕೊಳ್ಳುತ್ತಿರುವುದರಿಂದ ಉಸಿರಾಡುವುದೂ ಕಷ್ಟವಾಗಿದೆ. ಈ ಭಾಗದ ಅನೇಕರು ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜನರ ಬದುಕನ್ನು ಬಲಿಕೊಟ್ಟು ಕಂಪೆನಿ ನಡೆಸುವ ಅಗತ್ಯವಿಲ್ಲ. ಕಂಪೆನಿ ಕಾರ್ಯಾಚರಣೆ ನಡೆಸಲೇಬೇಕಾದರೆ ಮೊದಲು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ಈ ಪ್ರದೇಶದಲ್ಲಿ ಕಂಪೆನಿ ಕಾರ್ಯಾಚರಣೆಗೆ ಅವಕಾಶ ನೀಡುವುದಿಲ್ಲ.”
– ಲೋಕೇಶ್ ಪೂಜಾರಿ, ಅಧ್ಯಕ್ಷರು, ಬಜ್ಪೆ ಪಟ್ಟಣ ಪಂಚಾಯತ್
























