ಬಂಟ್ವಾಳ: ಕೇರಳಕ್ಕೆ ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಪಾಣೆಮಂಗಳೂರು ಸಮೀಪದ ಬೋಳಂಗಡಿಯ 27 ವರ್ಷದ ಯುವಕ ನಾಪತ್ತೆಯಾಗಿದ್ದು, ಈ ಸಂಬಂಧ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವಕನನ್ನು ಬೋಳಂಗಡಿಯ ಸಂತೋಷ್ ಎಂದು ಗುರುತಿಸಲಾಗಿದೆ. ಇವರು ಕೆಂಪು ಕಲ್ಲಿನ ಲಾರಿಗಳಲ್ಲಿ ಲೋಡರ್ ಆಗಿ ಕೆಲಸ ಮಾಡುತ್ತಿದ್ದರು. ಮೇ 1ರಂದು ಬೆಳಿಗ್ಗೆ ಮನೆಯಿಂದ ಹೊರಟಿದ್ದ ಸಂತೋಷ್, ಕೆಲಸದ ನಿಮಿತ್ತ ಕೇರಳಕ್ಕೆ ತೆರಳುತ್ತಿರುವುದಾಗಿ ಕುಟುಂಬದವರಿಗೆ ತಿಳಿಸಿದ್ದರು.
ಮನೆ ಬಿಡುವ ಸಂದರ್ಭದಲ್ಲಿ ಎರಡು ತಿಂಗಳ ಬಳಿಕ ವಾಪಸ್ ಬರುವುದಾಗಿ ಕುಟುಂಬದವರಿಗೆ ಹೇಳಿದ್ದರೆನ್ನಲಾಗಿದೆ. ಆದರೆ, ಅಂದಿನಿಂದ ಈವರೆಗೆ ಮನೆಗೆ ಹಿಂದಿರುಗದೆ, ಕುಟುಂಬದ ಸದಸ್ಯರನ್ನಾಗಲಿ ಅಥವಾ ಇತರರನ್ನಾಗಲಿ ದೂರವಾಣಿ ಮೂಲಕ ಸಂಪರ್ಕಿಸಿಲ್ಲ ಎಂದು ತಿಳಿದುಬಂದಿದೆ.
ಯುವಕನ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.






















