ಪುತ್ತೂರು: ಪುತ್ತೂರು ದೀಪೋತ್ಸವ ಸಮಿತಿ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಡಿಸೆಂಬರ್ 8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ-2026’ ಕಾರ್ಯಕ್ರಮದ ಲೋಗೋ ಮತ್ತು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಆಯೋಜಿಸುವ ದೀಪೋತ್ಸವವು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದರು.
ಮಹಾಲಿಂಗೇಶ್ವರನ ಸಾನ್ನಿಧ್ಯದಲ್ಲಿ ಸುಮಾರು 10 ಸಾವಿರ ಮಹಿಳೆಯರು ಒಟ್ಟಾಗಿ ದೀಪ ಬೆಳಗಿಸುವ ಗುರಿ ಹೊಂದಲಾಗಿದೆ. ಕರಾವಳಿಯಲ್ಲಿ ಈವರೆಗೆ ನಡೆದಿರದ ವಿಶಿಷ್ಟ ಕಾರ್ಯಕ್ರಮವಾಗಿ ಪುತ್ತೂರು ದೀಪೋತ್ಸವ ಮೂಡಿಬರಬೇಕು ಎಂದು ಅವರು ಆಶಿಸಿದರು.
ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ನೆಮ್ಮದಿಯ ವಾತಾವರಣ ಕಲ್ಪಿಸುವುದು ಮುಖ್ಯವಾಗಿದೆ. ರಾತ್ರಿ ವೇಳೆಯೂ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
₹15ರಿಂದ ₹18 ಲಕ್ಷ ವೆಚ್ಚದ ಅಂದಾಜು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೀಪೋತ್ಸವ ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪೂರ್ವವಾದ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ದೀಪೋತ್ಸವಕ್ಕೆ ಸುಮಾರು ₹15ರಿಂದ ₹18 ಲಕ್ಷ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, ನಗರದ ಮೂರು ಕಡೆಗಳಲ್ಲಿ ಸ್ವಾಗತ ದ್ವಾರ ನಿರ್ಮಿಸುವುದು, ಪೇಟೆಯನ್ನು ಅಲಂಕರಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಲೋಗೋ, ಆಮಂತ್ರಣ ಬಿಡುಗಡೆ
ದೀಪೋತ್ಸವದ ಲೋಗೋವನ್ನು ಖ್ಯಾತ ಎಲುಬು ತಜ್ಞ ಡಾ. ಅಜಯ್ ಬಿಡುಗಡೆಗೊಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ಬಾಲ್ಯೊಟ್ಟು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಶಶಿಕುಮಾರ್ ಬಾಲ್ಯೊಟ್ಟು ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು, ಪ್ರಧಾನ ಕಾರ್ಯದರ್ಶಿ ಡಾ. ರವೀಶ್ ಪಡುಮಲೆ, ಕೋಶಾಧಿಕಾರಿ ದಾಮೋಧರ ಪಾಟಾಳಿ, ಸಮಿತಿ ಸಂಚಾಲಕ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಸಹ ಕಾರ್ಯದರ್ಶಿ ಜಯಪ್ರಕಾಶ್ ರೈ ಚೆಲ್ಯಡ್ಕ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ಒಳತ್ತಡ್ಕ, ದೀಪೋತ್ಸವ ಸಮಿತಿ ಗೌರವಾಧ್ಯಕ್ಷ ಜಿ.ಎಲ್. ಬಲರಾಮ್ ಆಚಾರ್ಯ, ಮಹಿಳಾ ಗೌರವ ಸಲಹೆಗಾರ್ತಿ ಗೌರಿ ಬನ್ನೂರು ಸೇರಿದಂತೆ ರಾಮದಾಸ್ ಗೌಡ, ಪದ್ಮನಾಭ ಶೆಟ್ಟಿ, ಭಾಸ್ಕರ ಬಾರ್ಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಲ್ಲಾಸ್ ಕೋಟ್ಯಾನ್, ನೊಣಾಲು ಜಯರಾಜ್ ರೈ, ಜಗಜೀವನ್ ದಾಸ್ ರೈ ಹಾಗೂ ಕೃಷ್ಣವೇಣಿ ಉಪಸ್ಥಿತರಿದ್ದರು.
























