ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗ ಇನ್ನೂ ವಶಪಡಿಸಿಕೊಳ್ಳಲು ಬಾಕಿ ಇದೆ. ಯಾವುದೇ ಕಾರಣಕ್ಕೂ ಅದನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 50 ಕೋಟಿ ರೂ.ಗೂ ಅಧಿಕ ಮೌಲ್ಯದ ದೇವಸ್ಥಾನದ ಜಾಗವನ್ನು ಒಳಗೆ ಹಾಕಿಕೊಂಡವರಿದ್ದಾರೆ. 35ರಿಂದ 40 ಕೋಟಿ ರೂ. ಮೌಲ್ಯದ ಜಾಗವನ್ನು ನೋಟ್ ಮಾಡಿ ಇಟ್ಟುಕೊಂಡಿದ್ದೇವೆ. ಇದನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದ ಅವರು, ಈ ಜಾಗಗಳನ್ನು ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಆದರೆ ಆರ್.ಟಿ.ಸಿ.ಯಲ್ಲಿ ದೇವಸ್ಥಾನದ ಹೆಸರೇ ಇದೆ. ಹಾಗಾಗಿ ಆ ಎಲ್ಲಾ ಜಾಗಗಳನ್ನು ದೇವಸ್ಥಾನದ ಸುಪರ್ಧಿಗೆ ತೆಗೆದುಕೊಳ್ಳುತ್ತೇವೆ ಎಂದರು.
ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಆರೋಪಗಳನ್ನು ಮಾಡುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದೆಲ್ಲಾ ಯಾಕೆಂದರೆ, ಜಾಗಗಳನ್ನು ಒಳಗೆ ಹಾಕಿದವರು ಅವರ ಜನಗಳೇ. ಹಾಗಾಗಿ ಅಡ್ಡಿ ಮಾಡಲು ಯತ್ನಿಸುತ್ತಿದ್ದಾರೆ. ದೇವಸ್ಥಾನದ ಜೀರ್ಣೊದ್ಧಾರ ಕಾರ್ಯದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಆದರೆ ದೇವಸ್ಥಾನದ ಕಾರ್ಯಗಳಿಗೇನೂ ತೊಂದರೆಯಾಗಿಲ್ಲ. ಗ್ರಾನೈಟ್ ಅಳವಡಿಸಲು 4 ಕೋಟಿ ರೂ.ಗಳ ಅವಶ್ಯಕತೆ ಇತ್ತು. ಅದನ್ನು ಬೆಂಗಳೂರಿನ ಭಕ್ತರೊಬ್ಬರು ನೀಡುವ ವಾಗ್ದಾನ ಮಾಡಿದ್ದಾರೆ. ಅದೇ ರೀತಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ವಿದ್ಯುತ್ ದೀಪಗಳ ವ್ಯವಸ್ಥೆ ಆಗಬೇಕಿದೆ. ಹೀಗೆ ಕೆಲಸಗಳು ನಡೆಯುತ್ತಿವೆ. ಇವರೆಲ್ಲ ಮಾಡುವ ಆರೋಪ ಮಹಾಲಿಂಗೇಶ್ವರ ಮೇಲೆ. ನಾವು ದೇವಸ್ಥಾನದ 1 ರೂಪಾಯಿಯನ್ನು ಮುಟ್ಟಿಲ್ಲ. ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ಅನ್ಯಧರ್ಮದವರು ಹಿಂದೂ ಧರ್ಮದ ದೇವಸ್ಥಾನದ ವಿಚಾರದಲ್ಲಿಅರ್ಜಿ ಹಾಕುವಂತಿಲ್ಲ. ಈಗ ಅನ್ಯಧರ್ಮದವರು ಅರ್ಜಿ ಹಾಕುತ್ತಿದ್ದಾರೆ. ಹಾಗೆಂದು ಹೊಸ ರಸ್ತೆ ನಿರ್ಮಾಣದ ವಿಚಾರವನ್ನು ಕೈಬಿಡುತ್ತಿಲ್ಲ. ಇನ್ನು ಕೆಲವೇ ದಿನದಲ್ಲಿ ಕೆಲಸ ಶುರುವಾಗಲಿದೆ. ಹಾಗೆಂದು ಈ ರಸ್ತೆಯನ್ನು ನಾವು ಬೇರೆ ವಿಚಾರಕ್ಕೆ ಬಳಸಿಕೊಳ್ಳುತ್ತಿಲ್ಲ. ನಿರ್ಮಾಣವಾದ ರಸ್ತೆಯನ್ನು ನಗರಸಭೆಗೂ ಬಿಟ್ಟು ಕೊಡುವುದಿಲ್ಲ. ಅದು ದೇವಸ್ಥಾನಕ್ಕೆ ಸಂಬಂಧಪಟ್ಟ ರಸ್ತೆ. ಹಾಗೆಯೇ ಅದನ್ನು ಬಳಕೆ ಮಾಡುತ್ತೇವೆ ಎಂದರು.






















