ಪುತ್ತೂರು: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವತಿಯಿಂದ ಬುಧವಾರ ಸಂಜೆ ರೋಟರಿ ಜಿಎಲ್ ಸಭಾಭವನದಲ್ಲಿ ಪುತ್ತೂರು ನಗರಸಭೆಯ ಪೌರಕಾರ್ಮಿಕರಿಗೆ ಹಾಗೂ ಅಧ್ಯಾಪಕ ಭೂಷಣ ಪ್ರಶಸ್ತಿ ಪುರಸ್ಕೃತ ಸುಬ್ಬಪ್ಪ ಕೈಕಂಬ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುತ್ತೂರು ರೋಟರಿ ಕ್ಲಬ್ ನ ಯುವಜನ ಸೇವಾ ನಿರ್ದೇಶಕ ಹಾಗೂ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ಸೇವೆ ನಮ್ಮ ಬದುಕಿನ ಭಾಗವಾಗಬೇಕು. ಪ್ರಚಾರ ತೆಗೆದುಕೊಳ್ಳುವ ದೃಷ್ಟಿಯಿಂದ ಅಥವಾ ಇನ್ನೊಬ್ಬರಿಗೆ ತಿಳಿಸಿಕೊಡುತ್ತಾ ಮಾಡುವ ಕೆಲಸ ಸೇವೆಯೇ ಅಲ್ಲ. ಯಾರ ಅರಿವಿಗೂ ಬಾರದಂತೆ ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಸೇವೆ ನಿಜವಾದ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ರೋಟರಿ, ರೋಟರ್ಯಾಕ್ಟ್ ಕ್ಲಬ್ ಗಳು ಸೇವೆಯನ್ನೇ ಪ್ರಮುಖ ಧ್ಯೇಯವಾಗಿಸಿಕೊಂಡಿವೆ ಎಂದರು.
ಸ್ವಚ್ಛತಾ ಸೇನಾನಿಗಳಾಗಿರುವ ಪೌರಕಾರ್ಮಿಕರು ನಿಜವಾದ ಸ್ವಚ್ಛತೆಯ ರಾಯಭಾರಿಗಳು. ಅವರು ಸ್ವಚ್ಛ ಮಾಡಿದರೆ ಮಾತ್ರ ನಾವು ನಿರ್ಮಲವಾಗಿರಲು ಸಾಧ್ಯ. ಇಲ್ಲದೇ ಹೋದರೆ ನಮ್ಮ ಸುತ್ತಮುತ್ತಲಿನ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ. ಹಾಗೆಂದು ಸನ್ಮಾನ ಮಾಡುತ್ತಾರೆ, ಗೌರವಿಸುತ್ತಾರೆ ಎನ್ನುವ ಭಾವನೆಯಿಂದ ಅವರು ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ. ಅದಾವುದರ ಪರಿವೇ ಇಲ್ಲದೇ ತಮ್ಮ ಕರ್ತವ್ಯ, ಕೆಲಸ ಎಂದು ಕಾರ್ಯೋನ್ಮುಖರಾಗುತ್ತಾರೆ. ಹಾಗಾಗಿ, ಪೌರಕಾರ್ಮಿಕರಿಗೆ ನೀಡಿದ ಗೌರವ ಎಲ್ಲಾ ಸ್ವಚ್ಛತಾ ಸೇನಾನಿಗಳಿಗೆ ಸಲ್ಲುತ್ತದೆ ಎಂದರು.
ಪೌರಕಾರ್ಮಿಕ ಪ್ರವೀಣ್ ಕರ್ಮಲ ಮಾತನಾಡಿ, ನಮ್ಮನ್ನು ಗುರುತಿಸಿ ಗೌರವಿಸಿರುವುದಕ್ಕೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಹಾಗೂ ನಗರಸಭೆಗೆ ದನ್ಯವಾದ ತಿಳಿಸುತ್ತೇವೆ. ಸನ್ಮಾನ ನೀಡಿ ಗೌರವಿಸಿದ್ದರಿಂದ ನಮ್ಮ ಮೇಲಿನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು.
ಕ್ಲಬ್ ಸಭಾಪತಿ ಶ್ರೀಧರ್ ಆಚಾರ್ಯ ಕೆ. ಶುಭಹಾರೈಸಿದರು. ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಸ್ವಾತಿ ಪ್ರಾರ್ಥಿಸಿ, ಕಾರ್ಯದರ್ಶಿ ಸುಕನ್ಯಾ ವಂದಿಸಿದರು. ನವೀನ್ ಚಂದ್ರ, ಸುಕನ್ಯಾ, ಸುಶಾಂತ್, ಗಣೇಶ್ ಕಲ್ಲರ್ಪೆ ಅತಿಥಿಗಳ ಪರಿಚಯವನ್ನು ಸಭೆಯ ಮುಂದಿಟ್ಟರು. ಶಶಿದರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.























