ಪುತ್ತೂರು: ಭಾರತ ದೇಶದ ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರ ಮೂಲಕ ಸನಾತನ ಧರ್ಮವನ್ನು ಉಳಿಸಬೇಕು. ಪರಕೀಯರು ಆಕ್ರಮಣ ಮಾಡಿ ದೇಶವನ್ನು ಕೊಳ್ಳೆ ಹೊಡೆದರೂ, ಸಂಪಾದಿಸಿದ ಜ್ಞಾನವನ್ನು ಕದಿಯಲು ಸಾಧ್ಯವಾಗಿಲ್ಲ. ಅದರಲ್ಲೂ ಯೋಗದ ಜ್ಞಾನವೆಂಬುದು ದೇಶದ ಬಹುದೊಡ್ಡ ಆಸ್ತಿ. ಈ ಆಸ್ತಿಯನ್ನು ನಮ್ಮ ಹಿರಿಯರ ಮೂಲಕ, ಜ್ಞಾನಿಗಳ ಮೂಲಕ ನಾವು ಸಂಪಾದಿಸಿಕೊಳ್ಳುವುದು ಅತ್ಯವಶ್ಯ ಎಂದು ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದರು.
ಅವರು ಇತ್ತೀಚೆಗೆ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಹಠ ಯೋಗ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗವೆಂಬುದು ಸನಾತನ ಕಾಲದಿಂದಲೇ ಋಷಿ ಮುನಿಗಳು ಮಾಡಿದ ಅಮೋಘ ಸಾಧನೆಯಾಗಿದೆ. ಸನಾತನ ಹಿಂದೂ ಧರ್ಮದ ಅವಕಾಶಗಳನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಬೇಕು. ದೇಶದ ರಕ್ಷಣೆ ಯೋಗದ ರಕ್ಷಣೆ ನಾವೆಲ್ಲ ಮಾಡಬೇಕಿದೆ. ಹಾಗಾಗಿ ಭಾರತೀಯರಾದ ನಾವು ಅನುಷ್ಠಾನದಲ್ಲಿ ಭಾರತೀಯರಾಗಬೇಕು. ಆ ಮೂಲಕ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು ಎಂದರು.
ಮುಖ್ಯ ಅತಿಥಿ ಹಠ ಯೋಗ ಶಿಬಿರದ ಯೋಗ ಗುರು ಹಾಗೂ ಇಂಡಿಯನ್ ಯೋಗ ಅಸೋಸಿಯೇಷನ್‌ನ ಅಜೀವ ಸದಸ್ಯರಾದ ಜಿಜ್ಞಾಸು ವಾಸುದೇವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಪಡೆಯಲು ಯೋಗ ಬೇಕು. ಯೋಗ ಮಾಡುವ ಮೊದಲು ರೋಗದ ಬಗ್ಗೆ ತಿಳುವಳಿಕೆ ಇರಬೇಕು, ಮನೋದೈಹಿಕ ಕಾಯಿಲೆಗಳನ್ನು ನೋಡಿದಾಗ ಆ ಕಾಯಿಲೆಗಳು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದೆ. ದೇಹದಲ್ಲಿ ಜೀವ ಶಕ್ತಿ ಹೆಪ್ಪುಗಟ್ಟಿದಾಗ ರೋಗಗಳು ಬರುತ್ತವೆ. ಇದಕ್ಕೆ ಉತ್ತೇಜನ – ವಿಶ್ರಾಂತಿ ನೀಡಬೇಕು. ಜೀವದ ಅತ್ಯಂತ ಮೂಲಭೂತ ಲಕ್ಷಣ ಮಿಡಿಯುವಿಕೆ. ಮನುಷ್ಯನಲ್ಲಿ ಜೀವಂತಿಕೆಯ ಮಟ್ಟವನ್ನು ಹೆಚ್ಚಿಸುವುದಕ್ಕೆ ಯೋಗ ಮೂಲ ವ್ಯವಸ್ಥೆಯಾಗಿದೆ. ಆದುದರಿಂದ ಪ್ರತಿಯೊಬ್ಬರ ಸಮಗ್ರ ದೈಹಿಕ, ಮಾನಸಿಕ ಸ್ವಾಸ್ಥö್ಯಕ್ಕೆ ಯೋಗ ಒಂದು ಪ್ರಮುಖ ಔಷಧಿಯಾಗಿದೆ ಎಂದರು.
ಕಾರ್ಯಕ್ರಮದ ಬಳಿಕ ಹಠ ಯೋಗದಲ್ಲಿ ಬರುವ ಉಜ್ಜಾಯಿ ಪ್ರಾಣಾಯಾಮ ಪ್ರಾತ್ಯಕ್ಷಿಕೆ ನಡೆಸಲಾಯಿತು.
ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಖಜಾಂಚಿ ರಾಜಶ್ರೀ ಎಸ್. ನಟ್ಟೋಜ, ಶಿಬಿರದ ಸಹಾಯಕ ಗುರು ಮೇಘಶ್ರೀ ಉಪಸ್ಥಿತರಿದ್ದರು. ಭೌತಶಾಸ್ತ್ರ ಉಪನ್ಯಾಸಕಿ ವರ್ಷಾ ಮೊಳೆಯಾರ್ ಕಾರ್ಯಕ್ರಮ ನಿರ್ವಹಿಸಿದರು.
























