ಶಿಕ್ಷಣ

ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಪ್ರತಿಭಾ ತರಂಗಿಣಿ | ಸ್ವಂತ ಸಾಮರ್ಥ್ಯ ಅರಿತುಕೊಳ್ಳಿ: ಡಾ.ಎಂ.ನರಸಿಂಹ ಮೂರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಾವಿಂದು ಕೃತಕ ಬುದ್ಧಿಮತ್ತೆಯ ಕಾಲದಲ್ಲಿದ್ದೇವೆ. ಎಐ ಎಂಬುದು ನಾವು ಮಾಹಿತಿಯನ್ನು ತುಂಬಿದ ವ್ಯವಸ್ಥೆಯೇ ಹೊರತು ಅದಾಗಿಯೇ ಹುಟ್ಟಿದಂತಹದ್ದಲ್ಲ. ಆದರೆ ನಾವಿಂದು ತುಂಬಿದ ಮಾಹಿತಿಯನ್ನು ನೋಡಿ ಬೆರಗಾಗುತ್ತಿದ್ದೇವೆಯೇ ವಿನಃ ನಮ್ಮೊಳಗಿನ ಶಕ್ತಿಯನ್ನು ಗುರುತಿಸುತ್ತಿಲ್ಲ. ಹಾಗಾಗಿ ಭಗವಂತ ನಮಗೆ ಕೊಟ್ಟಿರುವ ಸಾಮರ್ಥ್ಯವನ್ನು ವಿಮರ್ಶಿಸಬೇಕಲ್ಲದೆ, ನಮ್ಮ ಮುಂಡದ ಶಕ್ತಿಯ ಅಗಾಧತೆಯನ್ನು ಅರಿಯಬೇಕು ಎಂದು ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎಂ.ನರಸಿಂಹ ಮೂರ್ತಿ ಹೇಳಿದರು.

gl

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವಿರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರತಿಭಾ ತರಂಗಿಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.

ಭಾರತೀಯ ಶಿಕ್ಷಣದಲ್ಲಿ ಪ್ರಶ್ನೋತ್ತರ ರೂಪದಲ್ಲಿ ಗುರು ಶಿಷ್ಯರಿಬ್ಬರೂ ಕಲಿಯುವಂತಹ ಸಂದರ್ಭವಿತ್ತು. ಆದರೆ ಆಧುನಿಕ ಶಿಕ್ಷಣ ಅಂತಹ ಅತ್ಯಪೂರ್ವ ವ್ಯವಸ್ಥೆಯನ್ನು ತೊಡೆದು ಹಾಕಿದೆ. ಹಾಗಾಗಿ ನಾವಿಂದು ಯಾವುದನ್ನೂ ವಿಶ್ಲೇಷಿಸದೆ ಸ್ವೀಕರಿಸುತ್ತಿದ್ದೇವೆ. ವಿಷಯವೊಂದಕ್ಕೆ ಇರಬಹುದಾದ ವಿವಿಧ ಸಾಧ್ಯತೆಗಳ ಕುರಿತಾಗಿ ಯೋಚಿಸದೆ ಇರುವುದನ್ನು ಇದ್ದ ಹಾಗೆ ಮಾತ್ರ ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಳ್ಳುತ್ತಾ ಯಾಂತ್ರೀಕೃತ ಬದುಕನ್ನು ಸಾಗಿಸುತ್ತಿದ್ದೇವೆ ಎಂದರು.

ಇಂದು ಪಾಶ್ಚಿಮಾತ್ಯ ವಿಚಾರಧಾರೆಗಳೆಡೆಗೆ ನಾವು ಕುರುಡಾಗಿ ಶರಣಾಗುತ್ತಿದ್ದೇವೆ. ಹಾಗಾಗಿ ಪಾಶ್ಚಿಮಾತ್ಯರು ನಮ್ಮನ್ನು ಮೂರ್ಖರನ್ನಾಗಿಸುತ್ತಲೇ ಇದ್ದಾರೆ. ಎಲ್ಲಿಯವರೆಗೆ ನಾವು ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ವಿಕಾಸ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ದಾಸ್ಯದಲ್ಲೇ ಇರುತ್ತೇವೆ. ಹಾಗಾಗಿ ಜ್ಞಾನವನ್ನು ವಿಜ್ಞಾನ ಸಮೇತವಾಗಿ ವಿಮರ್ಶಿಸುವ ಗುಣವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಎಸ್.ಸಿ. ಅವರು ಮಾತನಾಡಿ, ರಾಷ್ಟ್ರಭಕ್ತಿ, ಸಂಸ್ಕಾರ ಮೂಡಿಸುವಲ್ಲಿ ಅಂಬಿಕಾ ಸಂಸ್ಥೆಯ ಪಾತ್ರ ದೊಡ್ಡದು. ಸಂಸ್ಕೃತಿಯನ್ನು ಅರಿಯುವಲ್ಲಿ, ದೇಶಕ್ಕಾಗಿ, ಸಮಾಜಕ್ಕಾಗಿ ಬದುಕಬೇಕೆನ್ನುವ ಭಾವನೆಯನ್ನು ಬೆಳೆಸಿಕೊಳ್ಳುವಲ್ಲಿ ಅಂಬಿಕಾ ಅತ್ಯುತ್ತಮ ಅಡಿಪಾಯವನ್ನು ಹಾಕಿಕೊಡುತ್ತದೆ ಎಂದು ಹೇಳಿದರು.

ಮತ್ತೋರ್ವ ಅತಿಥಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸ್ವಾತಿ ಜೆ. ರೈ ಮಾತನಾಡಿ, ಸಮಾಜಕ್ಕೆ ಅತ್ಯುತ್ತಮ ನಾಗರಿಕರನ್ನು ಒದಗಿಸಿಕೊಡುವ ಜವಾಬ್ದಾರಿ ಹೆತ್ತವರಿಗಿದೆ. ಹಾಗಾಗಿ ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆಂಬುದು ಮುಖ್ಯ. ಮಕ್ಕಳು ನಮ್ಮನ್ನು ನೋಡುತ್ತಾ ಕಲಿಯುತ್ತಾರೆಂಬುದನ್ನು ನಾವು ತಿಳಿದಿರಬೇಕು. ಹಾಗಾಗಿ ಮಕ್ಕಳು ಬೆಳೆಯುವ ಕಾಲದಲ್ಲಿ ದೇಶಭಕ್ತಿ, ಜವಾಬ್ದಾರಿ, ಅನುಭವದ ಆಧಾರದಲ್ಲಿ ಮಕ್ಕಳು ಬೆಳೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ಅಂಬಿಕಾ ಸಂಸ್ಥೆ ದೊಡ್ಡ ಕೆಲಸ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಭಾರತೀಯ ಸಂಸ್ಕೃತಿಯ ಆಧಾರದಲ್ಲಿಯೇ ಅಂಬಿಕಾ ಸಂಸ್ಥೆ ಸಕಲ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ದೇಶ ಮೊದಲು ಎಂಬ ಕಲ್ಪನೆಯಡಿ ಇಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ. ಹಾಗಾಗಿಯೇ ಅಂಬಿಕಾದ ವೇದಿಕೆಯಲ್ಲಿ ಪಾಶ್ಚಿಮಾತ್ಯ ನೃತ್ಯಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಭಾರತೀಯ ಕಲೆ, ನಾಟ್ಯಗಳಿಗೇ ಈ ವೇದಿಕೆ ಮೀಸಲಾಗಿದೆ. ಮಕ್ಕಳು ಬೆಳೆದ ನಂತರ ಹೆತ್ತವರನ್ನು ಮರೆಯದಂತಹ ಸಂಸ್ಕಾರ, ಶಿಕ್ಷಣವನ್ನು ಕೊಡುವ ಗುರುತರ ಉದ್ದೇಶದೊಂದಿಗೆ ಅಂಬಿಕಾ ಮುನ್ನಡೆಯುತ್ತಿದೆ ಎಂದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಪ್ರಾಂಶುಪಾಲೆ ಮಾಲತಿ ಡಿ., ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದಿಂದ ತೊಡಗಿ ರಾಷ್ಟçಮಟ್ಟದವರೆಗೆ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ಕ್ರೀಡಾ ಸಾಧಕರು, ಶೈಕ್ಷಣಿಕ ಸಾಧಕರು, ಸ್ಕೌಟ್ಸ್ ಅಂಡ್ ಗೈಡ್ಸ್ನಲ್ಲಿ ರಾಜ್ಯಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಸ್ಥೆಯಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು, ಶೈಕ್ಷಣಿಕ ಸಾಧನೆಗೈದವರನ್ನು ಅಭಿನಂದಿಸಲಾಯಿತು.

ವಿದ್ಯಾರ್ಥಿ ಕೆ.ಹಿಮನೀಶ ಗೌಡ ಶಂಖನಾದಗೈದರು. ವಿದ್ಯಾರ್ಥಿ ಸನ್ಮಯ್ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ಸಾತ್ವಿಕ್ ಜಿ. ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ವಂಶಿಕಾ ಬಿ. ವಂದಿಸಿದರು. ಶಿಕ್ಷಕಿಯರಾದ ಸ್ವಾತಿ ಮತ್ತು ಸುಷ್ಮಾ ಮಿಥುನ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಂಶುಪಾಲೆ ಮಾಲತಿ ಡಿ. ಇವರಿಂದ ವೀಡಿಯೋ ಪ್ರಾತ್ಯಕ್ಷಿಕೆ ಸಹಿತ ವರದಿ ಮಂಡನೆ ನಡೆಯಿತು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಹಾಗೂ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…