ಶಿಕ್ಷಣ

ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದಲ್ಲಿ ವಿಶೇಷ ನೈತಿಕ ಶಿಕ್ಷಣ | ಓದಿನ ಜ್ಞಾನಕ್ಕಿದೆ ವ್ಯಕ್ತಿತ್ವ ರೂಪಿಸುವ ಶಕ್ತಿ: ಸತೀಶ್ ಭಟ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಬುದ್ಧಿವಂತಿಕೆ ಅಥವಾ ಹೆಚ್ಚಿನ ಅಂಕಗಳೇ ಮಾನದಂಡಗಳಲ್ಲ. ಶಿಸ್ತು, ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವವೂ ಒಂದು ಪ್ರತಿಭೆ. ಈ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿರಂತರ ಪ್ರಯತ್ನ ಮಾಡಿದಾಗ ಪ್ರತಿಯೊಬ್ಬರೂ ತಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದು ಯೋಗ ತರಬೇತುದಾರ ಹಾಗೂ ವ್ಯಕ್ತಿತ್ವ ವಿಕಸನ ತಜ್ಞ ಜೆ.ಸಿ. ಸತೀಶ್ ಭಟ್ ಬಿಳಿನೆಲೆ ಹೇಳಿದರು.

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ವಿಶೇಷ ನೈತಿಕ ಶಿಕ್ಷಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಓದು ಕೇವಲ ಪರೀಕ್ಷೆಯಲ್ಲಿ ಅಂಕಗಳಿಸುವುದಕ್ಕೆ ಸೀಮಿತವಾಗಬಾರದು. ಅದು ಜ್ಞಾನವನ್ನು ವಿಸ್ತರಿಸುವ, ಆಲೋಚನಾ ಸಾಮರ್ಥ್ಯವನ್ನು ಬೆಳೆಸುವ, ಸೃಜನಶೀಲತೆಯನ್ನು ಉತ್ತೇಜಿಸುವ ಹಾಗೂ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯುತ ಸಾಧನವಾಗಿದೆ. ಪ್ರತಿದಿನ ಓದುವ ಅಭ್ಯಾಸ ಬೆಳೆಸಿಕೊಂಡಾಗ ಭಾಷಾ ಕೌಶಲ, ಗ್ರಹಣಶಕ್ತಿ, ನೆನಪಿನ ಶಕ್ತಿ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಓದಿದ ವಿಷಯಗಳನ್ನು ಅರ್ಥಮಾಡಿಕೊಂಡು ಪುನರಾವರ್ತನೆ ಮಾಡುವುದು, ಮುಖ್ಯ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುವುದು ಹಾಗೂ ಕಲಿತ ವಿಷಯಗಳನ್ನು ಇತರರಿಗೆ ವಿವರಿಸುವುದು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ಹಲವು ಮಾನಸಿಕ ಮತ್ತು ಭಾವನಾತ್ಮಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ತರಗತಿಯಲ್ಲಿ ಪ್ರಶ್ನೆ ಕೇಳಲು ಹಿಂಜರಿಯುವುದು, ವೇದಿಕೆಯಲ್ಲಿ ಮಾತನಾಡಲು ಭಯಪಡುವುದು, ಇತರರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಾಚಿಕೆ ಪಡುವುದು, ಓದಿದ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಕಷ್ಟಪಡುವುದು ಹಾಗೂ ಪರೀಕ್ಷೆಯ ಸಮಯದಲ್ಲಿ ಆತಂಕಕ್ಕೆ ಒಳಗಾಗುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಬೇಕು. ಸಣ್ಣಸಣ್ಣ ಗುರಿಗಳನ್ನು ನಿಗದಿಪಡಿಸಿಕೊಂಡು ಅವುಗಳನ್ನು ಸಾಧಿಸುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಪ್ರತಿದಿನ ಹೊಸವಿಷಯಗಳನ್ನು ಕಲಿಯುವ ಹಂಬಲ, ಪ್ರಶ್ನಿಸುವ ಮನೋಭಾವ ಮತ್ತು ನಿರಂತರ ಅಭ್ಯಾಸ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದಕ್ಕಿಂತ ನಿನ್ನೆಗಿಂತ ಇಂದು ಉತ್ತಮವಾಗುವ ಗುರಿ ಹೊಂದಬೇಕು. ಸಣ್ಣಸಣ್ಣ ಬದಲಾವಣೆಗಳು ಮತ್ತು ನಿರಂತರ ಪ್ರಯತ್ನಗಳು ಜೀವನದಲ್ಲಿ ದೊಡ್ಡ ಸಾಧನೆಗೆ ಕಾರಣವಾಗುತ್ತವೆ. ಸಮಯ ಪಾಲನೆ, ಶಿಸ್ತು, ಪರಿಶ್ರಮ, ತಾಳ್ಮೆ, ಗುರಿಯ ಸ್ಪಷ್ಟತೆ ಮತ್ತು ಸಮರ್ಪಣೆಯಿಂದ ಯಶಸ್ಸು ರೂಪುಗೊಳ್ಳುತ್ತದೆ. ಸೋಲು ಬಂದಾಗ ನಿರಾಶರಾಗದೆ ಅದರಿಂದ ಪಾಠ ಕಲಿತು ಮತ್ತಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳು ಮತ್ತು ಅನಗತ್ಯ ಮನರಂಜನೆಗಳು ವಿದ್ಯಾರ್ಥಿಗಳ ಏಕಾಗ್ರತೆಗೆ ಅಡ್ಡಿಯಾಗುತ್ತಿವೆ. ಓದುವ ಸಮಯದಲ್ಲಿ ಮೊಬೈಲ್ನಿಂದ ದೂರವಿರುವುದು, ಓದಿಗೆ ಸೂಕ್ತವಾದ ವಾತಾವರಣ ನಿರ್ಮಿಸಿಕೊಳ್ಳುವುದು, ಸಮಯವನ್ನು ಸಮರ್ಪಕವಾಗಿ ಹಂಚಿಕೊಳ್ಳುವುದು ಮತ್ತು ಮಧ್ಯೆ ಮಧ್ಯೆ ವಿಶ್ರಾಂತಿ ಪಡೆಯುವುದು ಅಗತ್ಯವಾಗಿದೆ. ನೆನಪಿನ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಲು ಪುನರಾವರ್ತನೆ, ಧ್ಯಾನ, ಪ್ರಾಣಾಯಾಮ, ಉತ್ತಮನಿದ್ರೆ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಪರೀಕ್ಷೆಯನ್ನು ಭಯದ ದೃಷ್ಟಿಯಿಂದ ನೋಡದೆ, ಕಲಿತಿರುವುದನ್ನು ಪ್ರದರ್ಶಿಸುವ ಅವಕಾಶವೆಂದು ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ಯೋಗಾಸನ, ಪ್ರಾಣಾಯಾಮ, ಧ್ಯಾನ, ನಿಯಮಿತ ವ್ಯಾಯಾಮ, ಸರಿಯಾದ ನಿದ್ರೆ ಮತ್ತು ಸಕಾರಾತ್ಮಕ ಚಿಂತನೆ ಮಾನಸಿಕ ನೆಮ್ಮದಿಗೆ ಸಹಕಾರಿಯಾಗುತ್ತವೆ. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದು ಹಾಗೂ ಅಗತ್ಯವಿದ್ದಾಗ ಕುಟುಂಬದವರು ಮತ್ತು ಹಿತೈಷಿಗಳೊಂದಿಗೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು ಒತ್ತಡ ಕಡಿಮೆ ಮಾಡಲು ಸಹಕಾರಿ ಎಂದರು.

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಲ್ಲ ಒಂದು ವಿಶೇಷ ಸಾಮರ್ಥ್ಯ ಅಡಗಿರುತ್ತದೆ. ಅದನ್ನುಗುರುತಿಸಿ ಬೆಳೆಸಿಕೊಳ್ಳುವುದು ಮುಖ್ಯ. ಶಿಸ್ತು, ಪರಿಶ್ರಮ ಮತ್ತು ಸಮರ್ಪಣೆಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗಗಳನ್ನಾಗಿ ಮಾಡಿಕೊಂಡಾಗ ಸಾಧನೆಯ ಹಾದಿ ಸುಗಮವಾಗುತ್ತದೆ. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು, ಯೋಗ ಮತ್ತು ಧ್ಯಾನದ ಮೂಲಕ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಹಾಗೂ ನಿರಂತರ ಕಲಿಕೆಯ ಮೂಲಕ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ‘ನಾನುಮಾಡಬಲ್ಲೆ, ನಾನುಕಲಿಯಬಲ್ಲೆ, ನಾನುಸಾಧಿಸಬಲ್ಲೆ’ ಎಂಬ ಆತ್ಮವಿಶ್ವಾಸ ಪ್ರತಿಯೊಬ್ಬರಲ್ಲೂ ಮೂಡಬೇಕು. ನಿನ್ನೆಗಿಂತ ಇಂದು ಉತ್ತಮರಾಗುವ ಪ್ರಯತ್ನವೇ ನಾಳೆ ನಮ್ಮನ್ನು ಶ್ರೇಷ್ಠರನ್ನಾಗಿ ರೂಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಬಪ್ಪಳಿಗೆ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಎ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಟಿ.ಎಸ್.ಉರ್ಶಿತಾ ಕಾರ್ಯಕ್ರಮ ನಿರ್ವಹಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts