ಪುತ್ತೂರು: ಆರೋಗ್ಯ ಇಲಾಖೆಯ ಯೋಜನೆಯೊಂದರ ಬ್ಯಾನರಿನಲ್ಲಿ ಪ್ರಧಾನಿ, ಸಂಸದರ ಫೊಟೋವನ್ನು ಹಾಕಬೇಕಿತ್ತು. ಆದರೆ ಶಾಸಕರ ಫೊಟೋ ಮಾತ್ರ ರಾರಾಜಿಸುತ್ತಿದೆ. ಇದನ್ನು ಕಾಣುವಾಗ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತೆ ಭಾಸವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಲೇವಡಿ ಮಾಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾನರ್ ರಾಜಕೀಯ ಮಿತಿಮೀರಿದೆ. ನಾವು ಮಾಡುವ ಕೆಲಸವನ್ನು ನೋಡಿ ಜನ ಮಾತನಾಡಬೇಕು. ಆದರೆ ಬ್ಯಾನರ್ ಗಳನ್ನು ನೋಡಿ ಜನ ಉಗಿಯುವಂತಾಗಿದೆ. ಪರ್ಪುಂಜದಿಂದ ಪಂಜಳಕ್ಕೆ ಸಾಗುವ ರಸ್ತೆಯ ಕಾಮಗಾರಿಗೆ ಸಂಜೀವ ಮಠಂದೂರು ಅವರು ಶಾಸಕರಾಗಿದ್ದಾಗ 3 ಕೋಟಿ ರೂ. ಅನುದಾನ ನೀಡಿದ್ದರು. ಆ ಕಾಮಗಾರಿ ಶುರುವಾಗದೇ ಬ್ಯಾನರ್ ಹಾಕಲು ನಾವು ಬಿಟ್ಟಿರಲಿಲ್ಲ. ಆದರೆ ಇಂದು ಕಾಂಗ್ರೆಸ್ ಸರಕಾರದಲ್ಲಿ ಏನಾಗುತ್ತಿದೆ? ಇದೇ ರಸ್ತೆಯ ಕಾಮಗಾರಿಗೆ ನಮ್ಮ ಮನೆ ಬಾಗಿಲಲ್ಲಿ ತೆಂಗಿನಕಾಯಿ ಒಡೆದು ಹೋಗಿದ್ದಾರೆ. ಅದಾಗಿ ಮೂರು ಬ್ಯಾನರ್ ಹರಿದು, ಹೊಸದಾಗಿ ಹಾಕಲಾಗಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ. ಆದ್ದರಿಂದ ಬ್ಯಾನರ್ ರಾಜಕೀಯಕ್ಕೆ ಅಂತ್ಯ ಹಾಡಬೇಕು ಎಂದು ಒತ್ತಾಯಿಸಿದರು.
ಮಿತಿಮೀರಿದ ಪುಡಿ ರೌಡಿಗಳ ಕಾಟ:
ಕುರಿಯ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೆಣ್ಣು ಮಕ್ಕಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಓರ್ವ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದರು. ಪ್ರಕರಣವೂ ದಾಖಲಾಯಿತು. ಅಷ್ಟರಲ್ಲೇ ಬಿಡುಗಡೆಯೂ ಆಯಿತು. ಆರೋಪಿಯ ಬಿಡುಗಡೆಗೆ ಒತ್ತಡ ನೀಡಿದವರು ಯಾರು ಎನ್ನುವುದು ಜನರಿಗೆ ಗೊತ್ತಿದೆ. ಜನನಾಯಕ ಆಗುವುದು ಎಂದರೆ ಸೌಭಾಗ್ಯ. ಆತ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು ಎಂದರು.
ದರ ಏರಿಕೆಯ ಬಿಸಿ ಸರಕಾರಕ್ಕೆ ತಟ್ಟಲಿದೆ:
ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಈಗಾಗಲೇ ಶೇ. 50ರಷ್ಟು ಪೂರ್ಣಗೊಂಡಿದೆ. ಇದರಲ್ಲಿ ನಮ್ಮ ಹಕ್ಕನ್ನು ಕೇಳುವ ಪ್ರಯತ್ನ ಮಾಡಿದ್ದೇವೆ. 3 ಸಲ ಬಸ್ ದರ ಹೆಚ್ಚಳ ಮಾಡಿ, ಬಸ್ ಪ್ರಯಾಣವೇ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಹಾಲಿಗೆ 8 ರೂ. ಹೆಚ್ಚಳ ಮಾಡಿದ್ದಾರೆ. ಈ ಹಣವನ್ನು ರೈತರಿಗೆ ನೀಡಬೇಕಾಗಿತ್ತು. ಆದರೆ ಕೆಎಂಎಫ್ ಗೆ ನೀಡಿ, ರೈತರಿಗೆ ಮಹಾ ಮೋಸ ಮಾಡಿದ್ದಾರೆ. ಬರಪೀಡಿತ ಪ್ರದೇಶಗಳ ಜನರಿಗೆ 1 ಸಾವಿರ ರೂ.ವನ್ನು ನೀಡಿದ ಉದಾಹರಣೆ ಇದ್ದು, ಇದು ರೈತ ವಿರೋಧಿ ಸರಕಾರ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 6.5 ಲಕ್ಷ ಕೋಟಿ ರೂ.ಗೆ ಸಾಲ ಹೆಚ್ಚಳಗೊಂಡಿದೆ. ಕಾಂಗ್ರೆಸ್ ಸರಕಾರ ಹೀಗೆ ಆಡಳಿತದಲ್ಲಿ ಮುಂದುವರಿದರೆ ಈ ಸಾಲ 10 ಲಕ್ಷ ಕೋಟಿಗೆ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ. ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ 3 ತಿಂಗಳಿಗೊಮ್ಮೆ ನಡೆಯುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಇದು ಆಗಿಯೇ ಇಲ್ಲ. ಪ್ಲಾಟಿಂಗ್ ಮಾಡ್ತಾ ಇದ್ದೇವೆ ಎನ್ನುತ್ತಾರೆ. ಆದರೆ ಪ್ಲಾಟಿಂಗ್ ಆಗ್ತಾ ಇಲ್ಲ. ಪುತ್ತೂರು ಮೆಸ್ಕಾಂ ಟೆಂಡರನ್ನು ಕೇವಲ 4 ಜನರಿಗೆ ಮಾತ್ರ ನೀಡಲಾಗುತ್ತಿದೆ. ಅದರಲ್ಲೂ ಒಬ್ಬಾಕೆ ಅಲ್ಲಿನ ಅಧಿಕಾರಿಯ ಪತ್ನಿ. ಕಂದಾಯ ಇಲಾಖೆ ಭ್ರಷ್ಟಾಚಾರದ ಕೂಪವಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಾನತಾಗಿದ್ದು, ಹೊಸ ಇಓ ಬರಲು ಬಿಡುತ್ತಿಲ್ಲ ಎಂದರೆ ಏನರ್ಥ? ದೇವಳದ ಆಡಳಿತ ಮಂಡಳಿಯಂತೂ ಭ್ರಷ್ಟಾಚಾರ ನಡೆಸುತ್ತಿದೆ. ಪ್ರಶ್ನಿಸಲು ಹೋದ ಸಂರಕ್ಷಣಾ ಸಮಿತಿಯನ್ನೇ ನೀವ್ಯಾರು ಎಂದು ಪ್ರಶ್ನಿಸುತ್ತಾರೆ. ದೇವಸ್ಥಾನದ ವಿಚಾರದಲ್ಲಿ ಇದುವರೆಗೆ ಯಾರೂ ಭ್ರಷ್ಟಾಚಾರ ಮಾಡಲು ಹೋಗಿಲ್ಲ. ಕಳೆದ 50 ವರ್ಷಗಳಿಂದ ನೋಡುತ್ತಿದ್ದೇನೆ, ಇದು ಮೊದಲ ಬಾರಿಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ನಿತೀಶ್ ಕುಮಾರ್ ಶಾಂತಿವನ, ವಿರೂಪಾಕ್ಷ ಭಟ್, ಹರೀಶ್ ಬಿಜತ್ರೆ, ನಿರಂಜನ್ ಮಾನ್ಯ ಉಪಸ್ಥಿತರಿದ್ದರು.






















