ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿದ ಪುತ್ತೂರಿನಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಬಿಜೆಪಿಯವರು ಆಧಾರ ರಹಿತ, ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವುದನ್ನು ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಖಂಡಿಸಿದೆ.
ಬಿಜೆಪಿಯವರ ಆಂದೋಲನ ಕೇಂದ್ರದ ಬೆಲೆ ಏರಿಕೆ ವಿರುದ್ಧವೂ ನಡೆಯಲಿ: ಕೃಷ್ಣಪ್ರಸಾಸ್ ಆಳ್ವ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ, ಬಿಜೆಪಿ ಗ್ರಾಮ ಗ್ರಾಮದಲ್ಲಿ ಆಂದೋಲನ ನಡೆಸಿ ಶಾಸಕರ ಬಗ್ಗೆ ಕೀಳು ಶಬ್ದಗಳಿಂದ ಏನೇನೋ ಆರೋಪ ಮಾಡುತ್ತಿದ್ದಾರೆ. ಅವರು ಆರೋಪ ಮಾಡುವ ಮೊದಲು ಈಗಿನ ಶಾಸಕರು ಹಾಗೂ ಹಿಂದಿನ ಶಾಸಕರ ಅನುದಾನಗಳನ್ನು ತುಲನೆ ಮಾಡಿದರೆ ವ್ಯತ್ಯಾಸ ಅರಿವಾಗಬಹುದು. ಗೋಪಾಲಕೃಷ್ಣ ಹೇರಳೆಯವರು ಮೆಡಿಕಲ್ ಕಾಲೇಜು ಆಗುವಾಗ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂಬ ಹೇಳಿಕೆ ನೀಡಿದ್ದು ಮೆಡಿಕಲ್ ಕಾಲೇಜು ಆಗುವುದು ಅವರಿಗೆ ಮನವರಿಕೆಯಾಗಿದೆ. ಅಲ್ಲದೆ ಮೆಡಿಕಲ್ ಕಾಲೇಜಿಗೆ ಕಾಯ್ದಿರಿಸಿದ ಜಾಗವನ್ನು ಹಿಂದಿನ ಶಾಸಕರು ಮೀನು ಸಂಸ್ಕರಣಾ ಘಟಕ್ಕೆ ನೀಡಲು ಮುಂದಾಗಿದ್ದು ನಾಗರೀಕರ ಪ್ರತಿಭಟನೆಗೆ ಮಣಿದು ಹಿಂಪಡೆದಿರುತ್ತಾರೆ. ಬಿಜೆಪಿಯವರು ಶಾಸಕ ಅಶೋಕ್ ರೈಗಳ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದು ಸಮರ್ಥ ನಾಯಕ, ಜನಸೇವಕ ಅಶೋಕ್ ರೈಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅಶೋಕ್ ರೈಗಳ ಬಗ್ಗೆ ಮಾತನಾಡಿರುವ ಕಿಶೋರ್ ಬೊಟ್ಯಾಡಿ ಅವರು ಪುತ್ತೂರಿಗೆ ನೀಡಿದ ಕೊಡುಗೆಯನ್ನು ತಿಳಿಸಲಿ. ಪುತ್ತೂರಿಗೆ ಆಮದು ಮಾಡಿರುವ ಹೊಸಮುಖಗಳಾದ ವಿಕಾಸ್ ಪುತ್ತೂರು ಹಾಗೂ ಯತೀಶ್ ಆರ್ವಾರ ಅವರು ತಮ್ಮ ಸ್ಥಾನವನ್ನು ಭದ್ರಗೊಳಿಸಲು ಅಶೋಕ್ ರೈಗಳನ್ನು ಟೀಕಿಸುತ್ತಿದ್ದಾರೆ. ಅಶೋಕ್ ರೈಯವರನ್ನು ರೈಲು ಎಂದು ಹೇಳಿಕೆ ನೀಡಿರುವುದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಜಿ.ಪಂ., ತಾ.ಪಂ ಚುನಾವಣೆಯ ಉದ್ದೇಶದಲ್ಲಿ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಏನೇನೋ ಮಾತನಾಡುವ ಬದಲು ಮುಖಾಮುಖಿ ಚರ್ಚೆಗೆ ಬರಲಿ, ಅಶೋಕ್ ರೈಯುವರ ಸಾಧನೆಗಳನ್ನು ತೋರಿಸಲಿದ್ದೇವೆ. ನಿಮ್ಮ ಆಂದೋಲನ ರಾಜ್ಯಕ್ಕೆ ಸೀಮಿತವಾಗಿರದೇ ಕೇಂದ್ರದ ಇಂಧನ ಬೆಲೆ ಏರಿಕೆಯ ವಿರುದ್ಧವೂ ನಡೆಯಲಿ ಎಂದು ಹೇಳಿದರು.
ನಿಜವಾಗಿ ರೈಲು ಬಿಡುತ್ತಿರುವವರು ಯಾರು: ಹೇಮನಾಥ ಶೆಟ್ಟಿ
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಅಶೋಕ್ ಕುಮಾರ್ ರೈಯವರ ಅಭಿವೃದ್ಧಿ ಕಾರ್ಯಗಳಲ್ಲಿ ಪುತ್ತೂರು ರಾಜ್ಯದಲ್ಲಿಯೇ ಗುರುತಿಸಲ್ಪಟ್ಟ ಕ್ಷೇತ್ರವಾಗಿದೆ. ಬಿಜೆಪಿಯವರು ಬಾಡಿಗೆ ಜನ ತರಿಸಿ ಅಶೋಕ್ ರೈಯವರ ವಿರುದ್ಧ ಮಾತನಾಡಿಸುತ್ತಿದ್ದಾರೆ. ಅಂತಹ ತಾಕತ್ತು ಇರುವ ವ್ಯಕ್ತಿಗಳು ಪುತ್ತೂರು ಬಿಜೆಪಿಯಲ್ಲಿ ಇಲ್ವಾ. ಬಿಜೆಪಿಯವರಿಗೆ ತಾಕತ್ತಿದ್ದರೆ ಅಶೋಕ್ ರೈಯವರು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸಾಬೀತು ಪಡಿಸಲಿ. ಅವರು ನಾಟಕದ ಜೋಕರ್ ರೀತಿ ಮಾಡುತ್ತಿದ್ದಾರೆ. ಇಡೀ ಕ್ಷೇತ್ರ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿರುವಾಗ ಟೀಕೆ ಮಾಡುವ ಬಿಜೆಪಿಯವರಿಗೆ ಸರಿಯಾದ ಉತ್ತರ ನೀಡಲು ಬದ್ಧರಾಗಿದ್ದೇವೆ. ನಾವು ಅಭಿವೃದ್ಧಿ ಮೂಲಕ ಉತ್ತರ ನೀಡುತ್ತಿದ್ದೇವೆ. ಅಶೋಕ್ ರೈಯವರನ್ನು ಅಶೋಕ್ ರೈಲು ಎಂದಿರುವ ಬಿಜೆಪಿಯವರು ನಿಜವಾಗಿ ರೈಲು ಬಿಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ಶಾಸಕರ ಬಗ್ಗೆ ಮಾತನಾಡಲು ವಿಕಾಸ್ ಪುತ್ತೂರು ಯಾರು, ಅವರಿಗೆ ಪುತ್ತೂರಿನ ಅಭಿವೃದ್ದಿ ಕಾಣುವುದಿಲ್ವಾ. ಬಾಯಿಗೆ ಬಂದAತೆ ಮಾತನಾಡುವುದಲ್ಲ. ತಾಕತ್ತಿದ್ದರೆ ಅವರು ನಮ್ಮ ಮುಂದೆ ಬರಲಿ. ನಾವು ಅವರಿಗೆ ಉತ್ತರ ನೀಡಲಿದ್ದೇವೆ. ದೇವಸ್ಥಾನದ ಅಭಿವೃದ್ಧಿ ಇತಿಹಾಸ. ಹಿಂದಿನ ಸಮಿತಿಯವರಿಗೆ ದೇವಸ್ಥಾನದ ಜಾಗವನ್ನು ಪಡೆಯುವ ತಾಕತ್ತು ಇರಲಿಲ್ಲ. ಅದನ್ನು ಅಶೋಕ್ ರೈಯವರು ಮಾಡಿದ್ದಾರೆ. ಅವರ ಸಾಧನೆ ದೇವರಿಗೆ ತೃಪ್ತಿಯಾಗಲಿದೆ. ಇವರು ಚುನಾವಣೆ ಕಾದಲ್ಲಿ ಬ್ರಹ್ಮಕಲಶ ಮಾಡಿಲ್ವಾ. ಅದರ ಲೆಕ್ಕಪತ್ರ ನೀಡಿದ್ದಾರಾ. ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದ ಹೇಮನಾಥ ಶೆಟ್ಟಿಯವರು ಅಶೋಕ್ ರೈಯವರು ರೈಲು ಅಲ್ಲ ಅಭಿವೃದ್ಧಿಯ ಹರಿಕಾರ. ಅವರು ದೇವಸ್ಥಾನಕ್ಕೆ ರೂ.೧ಕೋಟಿ ದೇಣಿಗೆ ನೀಡಿರುವುದಲ್ಲದೆ ಅವರ ಮುಖಾಂತರ ದಾನಿಗಳು ಕೋಟಿ ಕೋಟಿ ದೇಣಿಗೆ ನೀಡಿದ್ದಾರೆ. ಏನೂ ಮಾಡದವರು ಏನೇನೋ ಮಾತನಾಡುತ್ತಿದ್ದಾರೆ. ಊಟದ ವಿಚಾರದಲ್ಲಿ ಮಾತನಾಡಿ ವಿಷಯಾಂತರ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿ ಶಾಲು ಹಾಕಿಸಿಕೊಂಡಿ ಬೊಂಡ ಕುಡಿದವರು, ಊಟ ಮಾಡಿದವರ ದೇವಸ್ಥಾನಕ್ಕೆ ಕೊಡುಗೆಗಳೇನು ಎಂದು ನಮ್ಮ ಮುಂದೆ ಸವಾಲಿಗೆ ಬರಲಿ ಎಂದು ಅಶೋಕ್ ರೈಗಳು ಹೇಳಿದ್ದಾರೆ. ವ್ಯವಸ್ಥಿತವಾದ ಅನ್ನದಾನ ದಾನ ನಡೆಯುತ್ತಿದ್ದು ಈ ವಿಚಾರದಲ್ಲಿ ಭಕ್ತರನ್ನು ಎತ್ತಿ ಕಟ್ಟುವ ಕೆಲಸವವಾಗುತ್ತಿದೆ. ದೇವಸ್ಥಾನದಲ್ಲಿ ಎಲ್ಲಾ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತಿದ್ಧು ರಸ್ತೆ ನಿರ್ಮಾಣದ ವಿಚಾರದಲ್ಲಿ ಕೋರ್ಟ್ ಹೋಗಿದ್ದಾರೆ. ಸಂರಕ್ಷಣಾ ಸಮಿತಿ ಅಂದರೇನು. ಶಾಸಕರು ಹಾಗೂ ಆಡಳತ ಮಂಡಳಿಯವರ ಕೆಲಸಗಳ ಕಾರ್ಯಗಳಿಗೆ ಪ್ರೋತ್ಸಾಹ ನೀಡಿ ಸಂರಕ್ಷಣೆ ಮಾಡುವವರಾಗಬೇಕೆ ಹೊರತು ಸಂರಕ್ಷಣಾ ಸಮಿತಿ ಅಭಿವೃದ್ಧಿಗೆ ಮಾರಕ ಆಗಬಾರದು ಎಂದು ಹೇಳಿದರು.
ಕೈಲಾಗದವರು ಮೈ ಪರಚಿಕೊಂಡಂತಾಗಿದೆ ಬಿಜೆಪಿಯವರ ಕಥೆ-ಅಮಳ ರಾಮಚಂದ್ರ;
ರಾಜ್ಯ ಕಾಂಗ್ರೆಸ್ ವಕ್ತಾರು, ಪೂಡಾದ ಅಧ್ಯಕ್ಷರಾಗಿರುವ ಅಮಳ ರಾಮಚಂದ್ರ ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ಮೆಡಕಲ್ ಕಾಲೇಜು ನಿರ್ಮಾಣಗಳು ಪುತ್ತೂರಿಗೆ ಪುತ್ತೂರೇ ತಿರುಗಿ ನೋಡುವಂತೆ ಮಾಡಿದ್ದಾರೆ. ಇದು ಪುತ್ತೂರಿನ ಇತಿಹಾಸವಾಗಿದೆ. ಆದರೂ ಟೀಕೆ ಮಾಡುತ್ತಿರುವ ಬಿಜೆಪಿಯವರಿಗೆ ಕೈಲಾಗದವರು ಮೈ ಪರಚಿಕೊಂಡAತೆ ಅಗಿದೆ. ಬಜೆಟ್ನಲ್ಲಿ ಮೆಡಿಕಲ್ ಕಾಲೇಜಿಗೆ ಅನುಮೋದನೆ ದೊರೆತಾಗ ಜನರಲ್ಲಿ ನಿರಾಸೆಯ ಭಾವನೆ ಮೂಡಿಸಿದ್ದ ಬಿಜೆಪಿಯವರು ನಂತರ ಬಜೆಟ್ನಲ್ಲಿ ಮೆಡಿಕಲ್ ಕಾಲೇಜಿಗೆ ಅನುದಾನ ಮಂಜೂರಾದಾಗ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಕ್ಯಾತೆ ಎತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಯವರು ಪ್ರತಿಹಂತದಲ್ಲಿ ಅಡ್ಡಿ ಪಡಿಸುತ್ತಿದ್ದಾರೆ. ಆಸ್ಪತ್ರೆಗೆ ಭೂಮಿ ಪೂಜೆ ಆಗಿದ್ದು ಅಲ್ಲಿ ಕೆಲಸ ಕಾರ್ಯಗಳು ವೇಗವಾಗಿ ಸಾಗುತ್ತಿರುವುದನ್ನು ಬಿಜೆಪಿಯವರು ಪ್ರತ್ಯಕ್ಷವಾಗಿ ನೋಡಲಿ. ಬಾಯಿ ಚಪಲಕ್ಕೆ ಮಾತನಾಡುವುದು ಸರಿಯಲ್ಲ. ಶಾಸಕರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೊಟ್ಟೆ ಕಿಚ್ಚುಪಡುವುದಲ್ಲ. ದೇವಸ್ಥಾನದ ಯಾವ ರೀತಿ ಅಭಿವೃದ್ಧಿ ಆಗಿದೆ ಎನ್ನುವುದನ್ನು ದೇವಸ್ಥಾನದ ಪರಿಸರ ನೋಡಿದಾಗ ಅರಿವಾಗುತ್ತದೆ. ಇನ್ನೊಬ್ಬರ ಕಪಿಮುಷ್ಠಿಯಲ್ಲಿದ್ದ ದೇವಸ್ಥಾನದ ಜಾಗವನ್ನು ಹಿಂಪಡೆಯಲಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಆರ್ಥಿಕ ಕ್ರೂಡಿಕರಣವಾಗುತ್ತದೆ. ಇದರ ಬಗ್ಗೆಯೂ ಕ್ಯಾತೆ ಎತ್ತುತ್ತಿದ್ದಾರೆ, ದೇವಸ್ಥಾನದ ಅಭಿವೃದ್ಧಿ ಹಾಗೂ ಮೆಡಿಕಲ್ ಕಾಲೇಜಿನ ಉದ್ದೇಶಗಳಿಗೆ ಪದೇ ಪದೇ ಅಡ್ಡಿ ಪಡಿಸುತ್ತವ ಮೂಲಕ ಶಾಸಕರ ಚಾರಿತ್ರಯ ಹರಣ ಮಾಡುತ್ತಿದ್ದಾರೆ. ಇದು ಬಿಜೆಪಿಯವರು ಪುತ್ತೂರಿಗೆ ಮಾಡುವ ದ್ರೋಹವಾಗಿದೆ. ಇದನ್ನು ಪುತ್ತೂರಿನ ಕಾಂಗ್ರೆಸ್ ಏಕ ಕಂಠದಿಂದ ಖಂಡಿಸುತ್ತದೆ ಎಂದ ಅವರು ಬಿಜೆಪಿಯವರು ಇದಕ್ಕೆ ತಕ್ಕೆ ಬೆಲೆ ತರಲಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಅರ್ಷದ್ ದರ್ಬೆ, ಪೂಡ ಸದಸ್ಯ ನಿಹಾಲ್ ಶೆಟ್ಟಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಎಸ್ಸಿ ಘಟಕದ ವಲಯಾಧ್ಯಕ್ಷ ಮುಖೇಶ್ ಕೆಮ್ಮಿಂಜೆ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





















