ರಾಜಕೀಯ

ನೋಂದಣಿ ಶುಲ್ಕದಿಂದ ಪ್ರಮಾಣಪತ್ರದವರೆಗೆ ಎಲ್ಲವೂ ದುಬಾರಿಗೊಳಿಸಿ, ಹಣ ವಸೂಲಿ: ಡಾ. ವೈ ಭರತ್ ಶೆಟ್ಟಿ | ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೆ ಹೋರಾಟ: ಎಂ.ಎಲ್.ಸಿ. ಕಿಶೋರ್ ಕುಮಾರ್ ಪುತ್ತೂರು | ಗುರುಪುರದಲ್ಲಿ ‘ನಮ್ಮ ಹಕ್ಕು ನಮಗೆ ನೀಡಿ’ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಆಕ್ರೋಶ ಹೊರಹಾಕಿದ ಶಾಸಕರು

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದು, ಹಳ್ಳಿಗಳ ಪಂಚಾಯತ್ ವ್ಯವಸ್ಥೆಯನ್ನು ಕಡೆಗಣಿಸಿ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯ ಮೂಲಕ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ – ನಮ್ಮ ಹಕ್ಕು ನಮಗೆ ನೀಡಿ” ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.

ಜನರ ಸುಲಿಗೆ, ಶಾಲಾ ಕೊಠಡಿ ನಿರ್ಮಿಸಲಾಗದ ಅಸಮರ್ಥ ಸರ್ಕಾರ: ಶಾಸಕ ಡಾ. ವೈ. ಭರತ್ ಶೆಟ್ಟಿ

ಶಾಸಕ ಡಾ. ವೈ. ಭರತ್ ಶೆಟ್ಟಿ, ಕಾಂಗ್ರೆಸ್ ಸರ್ಕಾರದಲ್ಲಿ ಜನಸಾಮಾನ್ಯರು ಬದುಕುವುದೇ ದುಸ್ತರವಾಗಿದೆ. ನೋಂದಣಿ ಶುಲ್ಕ, ತೆರಿಗೆಗಳು ಮೂರ್ನಾಲ್ಕು ಪಟ್ಟು ಹೆಚ್ಚಾಗಿದ್ದು, ಹುಟ್ಟಿದ ಮಗುವಿನ ಜನನ ಪ್ರಮಾಣಪತ್ರದಿಂದ ಹಿಡಿದು ಸತ್ತವರ ಮರಣ ಪ್ರಮಾಣಪತ್ರದವರೆಗೂ ಹಣ ವಸೂಲಿ ಮಾಡುವಂತಹ ನೀಚ ವ್ಯವಸ್ಥೆಯನ್ನು ಈ ಸರ್ಕಾರ ತಂದಿಟ್ಟಿದೆ ಎಂದು ಆಕ್ರೋಶ ಹೊರಹಾಕಿದರು.

ಕಳೆದ ಮೂರೂವರೆ ವರ್ಷಗಳಲ್ಲಿ ಇಡೀ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗೆ ಒಂದೇ ಒಂದು ಕೊಠಡಿ ನಿರ್ಮಿಸಿಕೊಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ವಿವೇಕ ಯೋಜನೆಯಡಿ ಪ್ರತಿಯೊಂದು ಶಾಲೆಗೂ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದೆವು. ಆದರೆ ಇಂದು ಶಾಲೆಗಳಿಗೆ ಕುರ್ಚಿ, ಕಂಪ್ಯೂಟರ್‌ಗಾಗಿ ಎಂಆರ್‌ಪಿಎಲ್, ಎನ್‌ಎಂಪಿಎ, ಎಂಸಿಎಫ್‌ ನಂತಹ ಸಂಸ್ಥೆಗಳ ಸಿಎಸ್‌ಆರ್ ನೆರವನ್ನು ಬೇಡುವ ದುಃಸ್ಥಿತಿ ಬಂದಿದೆ. ಶಿಕ್ಷಣ ಕಾಶಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಅಂಗನವಾಡಿಗಳ ನಿರ್ವಹಣೆಗೆ ನಯಾಪೈಸೆ ನೀಡದ ಸರ್ಕಾರ, ಅಧಿಕಾರಿಗಳನ್ನು ಹಣ ವಸೂಲಿಗಾಗಿ ಬಳಸಿಕೊಳ್ಳುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ವರ್ಗಾವಣೆಗಾಗಿ ಲಂಚ ಕೊಟ್ಟು ಬಂದಿರುವ ಅಧಿಕಾರಿಗಳು ಸಾರ್ವಜನಿಕರ ಮೇಲೆ ದರ್ಪ ತೋರುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರ ಹಿಡಿದಿರುವ ಡಿ.ಕೆ. ಶಿವಕುಮಾರ್ ಸರ್ಕಾರದ ಸುತ್ತಲೂ ಬಕೆಟ್ ಹಿಡಿಯುವವರ ದಂಡೇ ನೆರೆದಿದ್ದು, ಮುಂದಿನ ಚುನಾವಣೆಯಲ್ಲಿ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಪಂಚಾಯತ್‌ಗಳಿಗೆ ಅನುದಾನ ಶೂನ್ಯ, ವಾಲ್ಮೀಕಿ ನಿಗಮದ ಹಣ ಲೂಟಿ – ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು

ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಪರಿಶಿಷ್ಟ ಸಮುದಾಯದ ₹46,000 ಕೋಟಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಲೂಟಿ ಮಾಡಲಾಗಿದೆ. ವಾಲ್ಮೀಕಿ ನಿಗಮದ ₹187 ಕೋಟಿ ಬಡವರ ಹಣವನ್ನು ನುಂಗಿ ನೀರು ಕುಡಿದಿರುವ ಈ ಸರ್ಕಾರದಲ್ಲಿ ಖಜಾನೆ ಪೂರ್ಣ ಖಾಲಿಯಾಗಿದೆ. ಪಂಚಾಯಿತಿಗಳಿಗೆ ನೀಡುವ ₹10 ಲಕ್ಷ ಅನುದಾನದಲ್ಲಿ ₹6 ಲಕ್ಷ ವಿದ್ಯುತ್ ಬಿಲ್‌ಗೇ ಹೋಗುತ್ತಿದ್ದು, ಹಳ್ಳಿಗಳ ರಸ್ತೆ, ಮೂಲಸೌಕರ್ಯಕ್ಕೆ ಹಣವೇ ಇಲ್ಲದಂತಾಗಿದೆ. ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನವೊಂದೇ ಇಂದು ಪಂಚಾಯಿತಿಗಳ ಉಳಿವಿಗೆ ಆಸರೆಯಾಗಿದೆ.

ರಾಜ್ಯದ 42 ಇಲಾಖೆಗಳಲ್ಲಿ 2 ಲಕ್ಷದ 84 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿದ್ದರೂ ಭರ್ತಿ ಮಾಡುತ್ತಿಲ್ಲ; ನಿರುದ್ಯೋಗಿ ಯುವಕರಿಗೆ ಯುವನಿಧಿಯೂ ಸಿಗುತ್ತಿಲ್ಲ. ವಸತಿ ಯೋಜನೆಯಡಿ 13 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಒಂದೇ ಒಂದು ಬಡ ಕುಟುಂಬಕ್ಕೆ ಮನೆ ಮಂಜೂರಾಗಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನಕ್ಕೆ ಕತ್ತರಿ ಹಾಕಲಾಗಿದೆ. 11A, 11B ದಾಖಲೆಗಳಿಗಾಗಿ ಬಡವರು ವರ್ಷಗಟ್ಟಲೆ ಅಲೆಯುವ ಪರಿಸ್ಥಿತಿ ತಂದೊಡ್ಡಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಿಂದಲೇ ಈ ಭ್ರಷ್ಟ ಸರ್ಕಾರದ ಜನವಿರೋಧಿ ಧೋರಣೆಗಳ ವಿರುದ್ಧ ಬೃಹತ್ ಜನಜಾಗೃತಿ ಮೂಡಿಸಿ, ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಶಾಸಕರು ಕರೆ ನೀಡಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts