ಇಡೀ ದೇಶದ ಗಮನ ಸೆಳೆದಿರುವ ಕರ್ನಾಟಕ ರಾಜ್ಯದ ಸಿಎಂ ಬದಲಾವಣೆ ಚರ್ಚೆ ಇದೀಗ ತಾರಕಕ್ಕೇರಿದೆ. ದಿಲ್ಲಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಮಂಗಳವಾರ (ಮೇ 26) ದೆಹಲಿಯ ಇಂದಿರಾ ಭವನದಲ್ಲಿ ಈ ಅತ್ಯಂತ ಮಹತ್ವದ ಸಭೆ ನಡೆಯುತ್ತಿದೆ.
ಆರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಅವರು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದರು.
ಇದಾದ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಸುಮಾರು 30 ನಿಮಿಷಗಳ ಕಾಲ ಈ ಸಭೆ ನಡೆದಿದ್ದು, ಇಬ್ಬರು ನಾಯಕರು ಮಾತ್ರ ಪ್ರತ್ಯೇಕವಾಗಿ ಮಾತನಾಡಿದರು. ಈ ಸಭೆಯಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.
ರಾಹುಲ್ ಗಾಂಧಿ ಅವರ ಕೊಠಡಿಯಲ್ಲಿ ಸಭೆ ಮುಕ್ತಾಯಗೊಂಡ ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರೊಂದಿಗೆ ಹೊರಗೆ ಕಾಯುತ್ತಿದ್ದರು. ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ವರದಿ ಹೇಳಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಎಂ. ವೀರಪ್ಪ ಮೊಯ್ಲಿ, ಆಂತರಿಕ ಅಭಿಪ್ರಾಯಗಳಿಗೆ ಸಮಯ ಮುಗಿದಿದೆ. ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಹೇಳಿದರು.
ರಾಜ್ಯ ರಾಜಕೀಯದಲ್ಲಿ ಇಂದಿನ ದಿನ ಅತ್ಯಂತ ಮಹತ್ವದೆನಿಸಿದೆ. ಸಿಎಂ ಬದಲಾವಣೆ, ಕೆಪಿಸಿಸಿ ಬದಲಾವಣೆ, ಸಂಪುಟ ಕಸರತ್ತೋ ಅಥವಾ ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆ ಹೀಗೆ ಯಾವ ವಿಚಾರದ ಬಗ್ಗೆ ಇಂದಿರಾ ಭವನದಲ್ಲಿ ಇಂದು ಮಾತುಕತೆ ನಡೆಸಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.






















