ರಾಜ್ಯದಲ್ಲಿ ಭೀಕರ ಬರಗಾಲದ ಸನ್ನಿವೇಶವಿದ್ದು ಇದೆಲ್ಲ ನಿವಾರಣೆಯಾಗಿ ಒಳ್ಳೆಯ ಮಳೆ-ಬೆಳೆ ಆಗಲಿ. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿ. ಜನರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.
ಅವರು ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ, ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೀಡಿನಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು. ನಂತರ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ನಾಲ್ಕು ದಿನಗಳಲ್ಲಿ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮಂಗಳೂರು ಮೂಲಕ ನೇರವಾಗಿ ಧರ್ಮಸ್ಥಳಕ್ಕೆ ಬಂದಿದ್ದೇನೆ. ಹಿಂದೂಗಳ ರಕ್ಷಣೆ ಮಾಡುವ ಬಿ.ಜೆ.ಪಿ. ನೇತೃತ್ವದ ಒಳ್ಳೆಯ ಸರ್ಕಾರ ಆಡಳಿತಕ್ಕೆ ಬರಲಿ ಎಂದು ಹಾಗೂ ರಾಜ್ಯದ ಸರ್ವತೋಮುಖ ಪ್ರಗತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ಅಡ್ಡಮತದಾನದ ಬಗ್ಗೆ ಲಕ್ಷಾಂತರ ಮಂದಿ ಪಕ್ಷದ ಕಾರ್ಯಕರ್ತರು ನೋವನ್ನು ಅನುಭವಿಸಿದ್ದಾರೆ. ಇದು ಬೇರೆ ಬೇರೆ ಚರ್ಚೆಗಳಿಗೆ ಗ್ರಾಸವಾಗಿತ್ತು. ತಾನು ಧರ್ಮಸ್ಥಳದ ಅಭಿಮಾನಿ ಭಕ್ತನಾಗಿದ್ದು, ಯಾವುದೇ ನೋವಾದಾಗ ಇಲ್ಲಿಗೆ ಬಂದು ಪರಿಹರಿಸಿಕೊಳ್ಳುತ್ತೇನೆ ಎಂದರು.
ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ನಡೆಯಬೇಕು. ಸತ್ಯಾಸತ್ಯತೆ ಹೊರಬರಬೇಕು ಎಂದು ಹೇಳಿದ್ದೆ. ಹಿರಿಯರ ಸಲಹೆಯಂತೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತನಾಡಿದ್ದೇನೆ. ಅವರ ಸಲಹೆಯಂತೆ ನಿರ್ಧಾರ ಕೈಬಿಟ್ಟು ದೇವರ ಭಕ್ತನಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ.
ಅಡ್ಡ ಮತದಾನ ಆದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ತನ್ನ ನಡುವಿನ ಆತ್ಮೀಯತೆ ಹಾಗೂ ವ್ಯವಹಾರದ ಬಗ್ಗೆ ಸಾಕಷ್ಟು ಅಪಪ್ರಚಾರವಾಗಿತ್ತು. ತಮ್ಮ ಮಧ್ಯೆ ಯಾವುದೇ ಅವ್ಯವಹಾರ, ಅಕ್ರಮ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ವಿಜಯೇಂದ್ರ, ಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಅವರಿಗೆ ಕೊಡಬೇಕಾದ ಗೌರವವನ್ನು ನಾನು ಕೊಟ್ಟಿದ್ದೇನೆ. ಯಾರು ಅಪಪ್ರಚಾರ ಮಾಡಿದ್ದಾರೊ ಅವರಿಗೆ ದೇವರು ಒಳ್ಳೆದು ಮಾಡಲಿ ಎಂದರು.
ರಾಜ್ಯದಲ್ಲಿ ಜನರ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಅನ್ಯಾಯ, ಅವ್ಯವಹಾರಗಳು ಅತಿಯಾಗುತ್ತಿವೆ. ಬಿ.ಜೆ.ಪಿ. ಪಕ್ಷದ ಬಗ್ಗೆ ತನಗೆ ಭರವಸೆ ಇದ್ದು ಜನರು ಹಾಗೂ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕಿ, ಬಿ.ಜೆ.ಪಿ. ಸರ್ಕಾರ ಮತ್ತೆ ಆಡಳಿತಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ 17 ಮಂದಿ ಶಾಸಕರು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಪಕ್ಷ ತೊರೆದು ಬಂದಿದ್ದರು. ಆಗ ಒಳ್ಳೆಯ ಸರ್ಕಾರ ಇತ್ತು. ಈಶ್ವರಪ್ಪ ಮರೆತಿರಬಹುದು. ಅನೇಕ ಕಾರ್ಯಕರ್ತರ ಹತ್ಯೆಯಾಗಿತ್ತು. ಅನೇಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಬೆದರಿಕೆ ಹಾಕಲಾಗಿತ್ತು. ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಒಳ್ಳೆ ಕೆಲಸ ಮಾಡಿದ್ದರು. ಆಗ ಗುತ್ತಿಗೆದಾರನ ಹತ್ಯೆಯಾಗಿತ್ತು ಎಂದು ನೆನಪಿಸಿದರು. ಈಶ್ವರಪ್ಪ ಶಾಸಕರೂ ಅಲ್ಲ. ಪಕ್ಷದಲ್ಲಿಯೂ ಇಲ್ಲ. ಹಾಗಾಗಿ ಅವರ ಹೇಳಿಕೆ ಮಹತ್ವ ನೀಡುತ್ತಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಹೆಸರುಗಳನ್ನು ತೇಲಿ ಬಿಡುತ್ತಾರೆ. ಇದರಿಂದ ಶಾಸಕರುಗಳಿಗೆ ಬೇಸರವಾಗಿದೆ. ಪಕ್ಷಕ್ಕೆ ದ್ರೋಹ ಬಗೆದವರು ಯಾರು ಎಂಬ ಸತ್ಯ ಇಂದಲ್ಲ ನಾಳೆ ಹೊರ ಬರಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿ ತಾನು ಎಂದೂ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಕೇಂದ್ರದಲ್ಲಿ ತಮ್ಮ ಪಕ್ಷದ ಸರ್ಕಾರ ಇರುವುದರಿಂದ ಸತ್ಯ ಸದ್ಯದಲ್ಲಿಯೇ ಹೊರಬರಲಿದೆ ಎಂದರು.
ಅನಗತ್ಯ ಚರ್ಚೆ ನಿಲ್ಲಿಸಿ ಮುಂದೆ ರಾಜ್ಯಾದ್ಯಂತ ಪ್ರವಾಸ ಮಾಡಿ ತಾನು ಬಿ.ಜೆ.ಪಿ. ಪಕ್ಷದ ಸಂಘಟನೆ ಮತ್ತು ಬಲವರ್ಧನೆ ಮಾಡುವುದಾಗಿ ತಿಳಿಸಿದರು. ಎಸ್.ಟಿ. ಸೋಮಶೇಖರ್ ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಸ್ವ-ರಕ್ಷಣೆಯ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ತನ್ನ ಬಗ್ಗೆ ಏನೇ ಅಪಪ್ರಚಾರ ಮಾಡಿದರೂ ನನಗೆ ಅನುಮಾನವಿಲ್ಲ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು. ಡಿ.ಕೆ.ಶಿ. ಬಹುಮುಖ ಪ್ರತಿಭೆಯ ಮುಖ್ಯಮಂತ್ರಿ. ರಾಷ್ಟ್ರ ನಾಯಕರಲ್ಲಿ ಎಲ್ಲಾ ವಿಚಾರಗಳನ್ನು ತಿಳಿಸಿದ್ದೇನೆ. ಪಕ್ಷ ಕಟ್ಟಲು ಅಧಿಕಾರ ನೀಡಿದ್ದಾರೆ. ಮುಖ್ಯಮಂತ್ರಿ ಆಗಲು ಅಲ್ಲ. ಏನಿದ್ದರೂ ಸತ್ಯ ಸದ್ಯದಲ್ಲಿಯೆ ಪ್ರಕಟವಾಗಲಿದೆ. ಬಿಡದಿ ವಿಚಾರದಲ್ಲಿಯೂ ದೆಹಲಿಯಲ್ಲಿ ಚರ್ಚೆ ನಡೆಸಲಾಗಿದೆ. ರೈತನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅವರ ಪರ ಹೋರಾಟಕ್ಕಾಗಿ ಪಕ್ಷ ಸಿದ್ಧವಿದೆ ಎಂದರು.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಸಿ.ಐ.ಜಿ. ವರದಿಯಲ್ಲಿ ಬಂದಿರುವ ಗ್ಯಾರಂಟಿ ಅಧ್ಯಕ್ಷರುಗಳನ್ನು ಬರಕಾಸ್ತುಗೊಳಿಸಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮುಂದುವರಿಸಲಿ. ನೂರಾರು ಕೋಟಿ ರೂ. ಅವ್ಯವಹಾರಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ವಿಜಯೇಂದ್ರ ಆರೋಪಿಸಿದರು.
ಎಸ್.ಐ.ಆರ್. ಬಗ್ಗೆ ಅಪಪ್ರಚಾರವಾಗುತ್ತಿದೆ. ಪಕ್ಷ ಯಾವ ರೀತಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು ಅವರು ಅದನ್ನು ಗಮನಿಸುತ್ತಾರೆ ಎಂದು ತಿಳಿಸಿದರು.
ಡಿ. ವಿ. ಸದಾನಂದ ಗೌಡ ತಮ್ಮನ್ನು ಸಂಪರ್ಕಿಸಿದ್ದಾರೆ. ಯಾವುದೇ ವಿಶಿಷ್ಟ ಮಾಹಿತಿ ನೀಡಿಲ್ಲ. ಬೆಂಗಳೂರಿಗೆ ಹೋದ ಮೇಲೆ ಅವರನ್ನು ಹಾಗೂ ಸಿ.ಟಿ. ರವಿ ಅವರನ್ನೂ ಸಂಪರ್ಕಿಸುವುದಾಗಿ ತಿಳಿಸಿದರು.
ಸಂಸದರಾದ ಬ್ರಿಜೇಶ್ ಚೌಟ, ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಗುರುರಾಜ ಗಂಟಿಹೊಳೆ, ಯಶಪಾಲ್ ಸುವರ್ಣ, ರಾಜೇಶ್ ನಾಯಕ್, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ, ಕೆ. ಪ್ರತಾಪ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು ಮತ್ತು ಪಕ್ಷದ ಕಾರ್ಯಕರ್ತರಾದ ಜಯಂತ್ ಕೋಟ್ಯಾನ್ ಹಾಗೂ ಶ್ರೀನಿವಾಸ ರಾವ್ ಧರ್ಮಸ್ಥಳ ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.






















