ಮಂಗಳೂರು: ಸಾರ್ವಜನಿಕವಾಗಿ ತಲವಾರು ಪ್ರದರ್ಶಿಸಿ ಜನರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಬ್ಬರನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಾರ್ಗತಲೆ ನಿವಾಸಿ ಹಾಗೂ ರೌಡಿಶೀಟರ್ ಮುಹಮ್ಮದ್ ಶಾಕಿರ್ ಮತ್ತು ಮಂಚಿಲ ನಿವಾಸಿ ಆಟೋ ರಿಕ್ಷಾ ಚಾಲಕ ಅಶ್ನಾಕ್ ಎಂದು ಗುರುತಿಸಲಾಗಿದೆ.
ತೊಕ್ಕೊಟ್ಟು ಬಳಿಯ ವಿನಮ್ರ ಬಾರ್‌ನಲ್ಲಿ ಭಾನುವಾರ ಮಧ್ಯರಾತ್ರಿ 12ರಿಂದ 12.20ರ ನಡುವೆ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಗಳ ಪೈಕಿ ಶಾಕಿರ್ ತಲವಾರು ಹಿಡಿದು ಬಾರ್‌ಗೆ ಬಂದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಶ್ನಾಕ್ ಆಟೋ ರಿಕ್ಷಾದಲ್ಲಿ ಶಾಕಿರ್‌ನನ್ನು ಕರೆದುಕೊಂಡು ಬಂದಿದ್ದು, ಬಳಿಕ ಬಾರ್‌ಗೆ ಪ್ರವೇಶಿಸಿದ ಶಾಕಿರ್ ತಲವಾರು ಪ್ರದರ್ಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಬಾರ್‌ನ್ನು ಬಂದ್ ಮಾಡುವಂತೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಘಟನೆಯ ದೃಶ್ಯಗಳು ಬಾರ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಲವಾರು ಹಿಡಿದು ವ್ಯಕ್ತಿಯೊಬ್ಬ ದಾಂಧಲೆ ನಡೆಸುತ್ತಿದ್ದ ವೇಳೆ ಬಾರ್‌ನಲ್ಲಿದ್ದ ಗ್ರಾಹಕರು ಭಯಭೀತರಾಗಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಹಮ್ಮದ್ ಶಾಕಿರ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
























