ಪುತ್ತೂರು: ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 3 ಲಕ್ಷ ರೂ. ದಂಡ ವಿಧಿಸಿದ ಆದೇಶಿಸಿದೆ.
ದಂಡದ ಮೊತ್ತದಲ್ಲಿ 5.90 ಲಕ್ಷ ರೂ.ವನ್ನು ಕಾರ್ತಿಕ್ ಮೇರ್ಲ ಅವರ ತಾಯಿ ಹೇಮಾವತಿ ಅವರಿಗೆ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಉಳ್ಳಾಲದ ಪ್ರೀತೇಶ್ ಶೆಟ್ಟಿ ಹಾಗೂ ಸಂಪ್ಯ ನಿವಾಸಿ ಕಿರಣ್ ರೈ ಶಿಕ್ಷೆಗೆ ಒಳಗಾದವರು. ಇನ್ನೋರ್ವ ಆರೋಪಿ ಮಂಗಳೂರಿನ ಅತ್ತಾವರದ ಸ್ಟೀವನ್ ಮೊಂತೆರೊ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ ಕಿರಣ್ ರೈ ಅವರ ಸಹೋದರ ಚರಣ್ ರಾಜ್ ರೈ ಕೂಡ ಆರೋಪಿಯಾಗಿದ್ದು, ವಿಚಾರಣೆ ಸಂದರ್ಭ ಜಾಮೀನಿನಲ್ಲಿದ್ದ ಅವರು 2022ರಲ್ಲಿ ಹತ್ಯೆಯಾಗಿದ್ದರು.
ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ವಾದಿಸಿದ್ದರು.
ಕಾರ್ತಿಕ್ ಮೇರ್ಲ ಹತ್ಯೆ:
2019ರ ಸೆಪ್ಟೆಂಬರ್ 3ರಂದು ಸಂಪ್ಯದಲ್ಲಿ ಕಾರ್ತಿಕ್ ಮೇರ್ಲ ಅವರ ಹತ್ಯೆ ನಡೆದಿತ್ತು. ಸಾರ್ವಜನಿಕ ಗಣೇಶೋತ್ಸವದ ಯಕ್ಷಗಾನ ವೀಕ್ಷಿಸುತ್ತಿದ್ದ ಕಾರ್ತಿಕ್ ಮೇರ್ಲ ಅವರನ್ನು ಆರೋಪಿಗಳಾದ ಚರಣ್ ರಾಜ್, ಕಿರಣ್, ಅವರ ವಾಹನ ಚಾಲಕ ಪ್ರೀತೇಶ್ ಶೆಟ್ಟಿ ಹರಿತವಾದ ಆಯುಧದಿಂದ ತಿವಿದಿದ್ದರು. ಸಾರ್ವಜನಿಕರು ಹಾಗೂ ಪೊಲೀಸರು ಕಾರ್ತಿಕ್ ಸುವರ್ಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಮೃತರ ಚಿಕ್ಕಪ್ಪ ಕೇಶವ ಸುವರ್ಣ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 504,341,302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು 2 ತಂಡ ರಚನೆ ಮಾಡಿ, ಬಂಧಿಸಲಾಗಿತ್ತು.























