ಅಪಘಾತ

ಪಡುಬಿದ್ರಿ: ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ – ಯುವಕ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಉಡುಪಿ: ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕ ಅಥವಾ ಪಾರ್ಕಿಂಗ್ ಲೈಟ್ ಅಳವಡಿಸದೆ ನಿಲ್ಲಿಸಲಾಗಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಂದಿಕೂರಿನ ಕಾರ್ಕಳ–ಪಡುಬಿದ್ರಿ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.

gl

ಮೃತ ಯುವಕನನ್ನು ಮಂಜುನಾಥ ಬೈಲಪ್ಪ ಮುರಗಾಲಿ (21) ಎಂದು ಗುರುತಿಸಲಾಗಿದೆ. ಮೂಲತಃ ರಾಯದುರ್ಗದವರಾಗಿರುವ ಅವರು ಸುರತ್ಕಲ್‌ನ ಕೋಡಿಕರೆ ಪರಿಸರದಲ್ಲಿ ವಾಸವಾಗಿದ್ದರು.

ಮಂಜುನಾಥ ಅವರು ಗುರುವಾರ ರಾತ್ರಿ ಕಾರ್ಕಳ ಕಡೆಯಿಂದ ಸ್ಕೂಟರ್‌ನಲ್ಲಿ ಸುರತ್ಕಲ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ನಂದಿಕೂರಿನ ಕಾರ್ಕಳ–ಪಡುಬಿದ್ರಿ ಬಸ್ ನಿಲ್ದಾಣದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಲಾರಿಯೊಂದನ್ನು ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಲಾರಿಗೆ ಪಾರ್ಕಿಂಗ್ ಲೈಟ್, ಇಂಡಿಕೇಟರ್ ಅಥವಾ ಯಾವುದೇ ಸೂಚನಾ ಫಲಕ ಅಳವಡಿಸಿರಲಿಲ್ಲ ಎಂದು ತಿಳಿದುಬಂದಿದೆ.

ಕತ್ತಲಿನಲ್ಲಿ ಲಾರಿ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಮಂಜುನಾಥ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts