ಮಂಗಳೂರು: ಕಂಕನಾಡಿ-ಫಳ್ನೀರ್ ರಸ್ತೆಯನ್ನು ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದ ಪರಿಣಾಮ 7 ವರ್ಷ ಪ್ರಾಯದ ಬಾಲಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಗದಗ ಜಿಲ್ಲೆಯ ಬಸಲ್ಪುರ ರೋಣ ಈಶ್ವರ ನಗರ ಮೂಲದ ಲಕ್ಷ್ಮಿ ಕಲಹಾಲ ಎಂಬವರ ಪುತ್ರ ವಿಶ್ವಾಸ್ ಅಶೋಕ್ ಕಲಹಾಲ ಮೃತ ಬಾಲಕನಾಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಈತನನ್ನು ತಕ್ಷಣಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಕಂಕನಾಡಿಯ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ವಿಶ್ವಾಸ್ ಬುಧವಾರ ಸಂಜೆ ಶಾಲೆಯಿಂದ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ಫಳ್ನೀರ್ ಕಡೆಗೆ ಹೋಗಲು ನಿಂತಿದ್ದ ಬಸ್ಸನ್ನು ಚಾಲಕ ನಿರ್ಲಕ್ಷ್ಮದಿಂದ ಒಮ್ಮೆಲೇ ಬಲಕ್ಕೆ ಚಲಾಯಿಸಿದ್ದಾನೆ. ಪರಿಣಾಮ ಬಸ್ ಬಡಿದು ಬಾಲಕ ರಸ್ತೆಗೆ ಬಿದ್ದಿದ್ದು, ಆತನ ಮೇಲೆ ಬಸ್ಸಿನ ಬಲ ಹಿಂಬದಿಯ ಚಕ್ರ ಹರಿದಿದೆ. ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

















