ವಿಟ್ಲ: ಪತ್ನಿಯನ್ನು ಕೊಲೆಗೈದು ಹೃದಯಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಲು ಯತ್ನಿಸಿದ ಪತಿಗೆ 2 ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಎಂಬಲ್ಲಿ ಡಿಸೆಂಬರ್ 11, 2024 ರಂದು ರಾತ್ರಿ ವೇಳೆ ಘಟನೆ ನಡೆದಿತ್ತು. ಅಂದು ರಾತಿ ಮಹಿಳೆಯ ಪತಿ ಸಂಜೀವ ನಾಯ್ಕ ತನ್ನ ಪತ್ನಿಗೆ ಹೃದಯಘಾತವಾಗಿದ್ದು ಕುಸಿದು ಬಿದ್ದಿದ್ದಾರೆ ಎಂದು ನೆರೆಮನೆಯವರಿಗೆ ತಿಳಿಸಿದ್ದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಅಲ್ಲಿ ಮೃತಪಟ್ಟಿದ್ದರು.
ಮಹಿಳೆಯ ಮೃತದೇಹದಲ್ಲಿ ಗಾಯಗಳಿರುವ ಹಿನ್ನೆಲೆಯಲ್ಲಿ ಸಂಶಯಾಸ್ಪದ ಮರಣ ಎಂಬುದಾಗಿ ವಿಟ್ಲ ಠಾಣೆಯಲ್ಲಿ ಅಕ್ರ 184/2024 u/s 103(1) BNS ರಂತೆ ಪ್ರಕರಣ ದಾಖಲಿಸಲಾಗಿತ್ತು.ಪ್ರಕರಣದ ತನಿಖೆ ನಡೆಸಿದ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪೊಲೀಸ್ ನಿರೀಕ್ಷಕರಾಗಿದ್ದ ನಾಗರಾಜ್ H E ರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಮೃತ ಮಹಿಳೆಯ ಗಂಡ ಸಂಜೀವ ನಾಯ್ಕ ಎಂಬಾತನ ವಿರುದ್ದ ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜಗದೀಶ್ ವಿ ಎನ್ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಬಿಎನ್ಎಸ್ 2023 ಸೆಕ್ಷನ್ 105ರ ಭಾಗ 2 ಅಡಿಯಲ್ಲಿ 5 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿದ್ದಾರೆ.
ದಂಡ ಪಾವತಿಸಲು ವಿಫಲವಾದದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ನಾಯ್ಕ್ ರವರು ಸಮರ್ಥವಾಗಿ ವಾದಮಂಡಿಸಿದ್ದರು.
















