ಬಂದಾರು/ಮೊಗ್ರು, ಸೆ. 21: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿಶೇಷ ಮುತುವರ್ಜಿ ಹಾಗೂ ಸೂಚನೆಯ ಮೇರೆಗೆ ಧರ್ಮಸ್ಥಳ–ಉಜಿರೆ–ಬೆಳಾಲು–ಬಂದಾರು–ಮೊಗ್ರು ಅಲೆಕ್ಕಿ–ಇಳಂತಿಲ–ಉಪ್ಪಿನಂಗಡಿ ಮಾರ್ಗದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಗೊಂಡಿದೆ.
ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಆರಂಭಿಸಿರುವ ಈ ಬಸ್ ಸೇವೆ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ದೈನಂದಿನ ಪ್ರಯಾಣಕ್ಕೆ ಸಹಕಾರಿಯಾಗಲಿದೆ. ಬೆಳಗ್ಗೆ ಧರ್ಮಸ್ಥಳದಿಂದ ಬೆಳಾಲು, ಬಂದಾರು, ಮೊಗ್ರು ಹಾಗೂ ಇಳಂತಿಲ ಮಾರ್ಗವಾಗಿ ಉಪ್ಪಿನಂಗಡಿಗೆ ಬಸ್ ಸಂಚರಿಸಲಿದ್ದು, ಸಂಜೆ ಉಪ್ಪಿನಂಗಡಿಯಿಂದ ಇಳಂತಿಲ, ಮೊಗ್ರು ಅಲೆಕ್ಕಿ, ಬಂದಾರು, ಬೆಳಾಲು ಹಾಗೂ ಉಜಿರೆ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಲಿದೆ.
ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕೆಂಬುದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿತ್ತು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಅವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಸ್ ಸೇವೆ ಮಂಜೂರು ಮಾಡಿಸಿದ್ದಾರೆ ಎಂದು ತಿಳಿಸಲಾಗಿದೆ.
ನೂತನ ಬಸ್ ಸೇವೆಯಿಂದ ಉಜಿರೆ, ಬೆಳಾಲು, ಬಂದಾರು, ಮೊಗ್ರು, ಇಳಂತಿಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರಿಗೆ ಧರ್ಮಸ್ಥಳ ಹಾಗೂ ಉಪ್ಪಿನಂಗಡಿ ಭಾಗಗಳಿಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ. ಬಸ್ ಸೇವೆ ಆರಂಭಗೊಂಡಿರುವುದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಶಾಸಕ ಹರೀಶ್ ಪೂಂಜ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.






















