ಉಜಿರೆ: ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಿರುವ ಸುಪ್ರೀಂ ಕೋರ್ಟಿನ ತೀರ್ಪನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತಿಸಿದೆ.
ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ವಿಚಾರ ಮಾಧ್ಯಮಗಳಿಂದ ತಿಳಿದುಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಶ್ರೀ ಕ್ಷೇತ್ರದ ಮೇಲೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಹಾಗೂ ನಿರಂತರವಾಗಿ ಅಪಪ್ರಚಾರ ನಡೆಸಿ, ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಕುಮಾರಿ ಸೌಜನ್ಯಾಳಿಗೆ ನ್ಯಾಯ ದೊರೆಯಬೇಕು ಎಂಬುದು ಶ್ರೀ ಕ್ಷೇತ್ರದ ದೃಢವಾದ ಆಶಯ. ಈಗ ಆದೇಶಿಸಲಾಗಿರುವ ಮರು ತನಿಖೆಯು ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿ ಮತ್ತು ಈ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ ಎಂದು ಆಶಿಸುತ್ತೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ಕಚೇರಿ ವ್ಯವಸ್ಥಾಪಕ ಕೆ. ಪಾರ್ಶ್ವನಾಥ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















